ಈ ಮಾತನ್ನು ಯಾರೋ ಅಭಿಮಾನಿ ಹೇಳಿದ್ದಿದ್ರೆ ಇದು ಅಭಿಮಾನದ ಮಾತು ಅಂತ ತಳ್ಳಿ ಹಾಕಬಹುದಿತ್ತು. ಆದ್ರೆ ಇಲ್ಲಿ ಮಾತನಾಡಿರುವುದು ಬಹುಭಾಷಾ ತಾರೆ, ಬೇಡಿಕೆಯ ಕಲಾವಿದ ಪ್ರಕಾಶ್ ರೈ. ಯುವರತ್ನ ಸಿನಿಮಾ ಬಗ್ಗೆ ಬಹಳ ಅಭಿಮಾನದಿಂದ ಮಾತನಾಡಿದ್ದಾರೆ ರೈ. ಬೇರೆ ಭಾಷೆಗಳ ಮುಂದೆ ತಾನು ಎದೆತಟ್ಟಿ ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ಚಿತ್ರ ‘ಯುವರತ್ನ’ ಎಂದು ಪುನೀತ್ ರಾಜ್ಕುಮಾರ್ ಅಭಿನಯದ ಚಿತ್ರವನ್ನು ಮನಸಾರೆ ಹೊಗಳಿದ್ದಾರೆ.
ಕಮರ್ಷಿಯಲ್ ಮತ್ತು ಆರ್ಟ್ ಸಿನಿಮಾ ಎರಡೂ ವಿಧಗಳಲ್ಲಿ ಸೈ ಎನಿಸಿಕೊಂಡಿದ್ದಾರೆ ಪ್ರಕಾಶ್ ರೈ. ಹಾಗಾಗಿ ಅವರ ಮಾತುಗಳು ನಿಜಕ್ಕೂ ಮಾನ್ಯತೆ ಉಳ್ಳದ್ದಾಗಿದೆ. ಕಮರ್ಷಿಯಲ್ ಸಿನಿಮಾಗಳು ನನಗೆ ಹೊಸದೇನಲ್ಲ, ಆದ್ರೆ ಯುವರತ್ನ ಸಿನಿಮಾ ಮಾಮೂಲಿ ಕಮರ್ಷಿಯಲ್ ಸಿನಿಮಾ ಅಲ್ಲ. ನಾನು ಬೆಂಗಳೂರಿನಿಂದ ದೆಹಲಿವರೆಗೂ ಹೋಗಿದ್ದೇನೆ. ನಮ್ಮಲ್ಲೂ ಅಂದ್ರೆ ಕನ್ನಡದಲ್ಲೂ ಇಂಥಾ ಸಿನಿಮಾ ಬರಬೇಕು ಅಂತ ಕೆಲ ಚಿತ್ರಗಳನ್ನು ನೋಡಿದಾಗ ತುಂಬಾ ಅನಿಸಿದೆ.
ಈಗ ಯುವರತ್ನ ಅಂಥಾ ಸಿನಿಮಾ ಆಗಿ ಹೊರಬರ್ತಿದೆ. ಬಿಗ್ ಬಜೆಟ್ ಸಿನಿಮಾ ಮಾಡೋದು ದೊಡ್ಡ ವಿಚಾರ ಅಲ್ಲ. ಅದನ್ನ ಅನೇಕರು ಮಾಡ್ತಾರೆ. ಆದ್ರೆ ಒಂದು ಪಕ್ಕಾ ಕಮರ್ಷಿಯಲ್, ಅದ್ಧೂರಿ ಸಿನಿಮಾದಲ್ಲಿ ಜನರಿಗೆ ಬೇಕಾದ ಮೌಲ್ಯಗಳನ್ನು ಸೇರಿಸೋದು ನಿಜಕ್ಕೂ ಸಣ್ಣ ವಿಚಾರವಲ್ಲ. ಯುವರತ್ನ ಆ ಕೆಲಸ ಮಾಡಿದೆ, ಹಾಗಾಗಿ ಬೇರೆ ಭಾಷೆಗಳ ಎದುರು ನಾನು ಹೆಮ್ಮೆಯಿಂದ ಈ ಚಿತ್ರದ ಬಗ್ಗೆ ಹೇಳಿಕೊಳ್ಳಬಲ್ಲೆ ಎಂದಿದ್ದಾರೆ ಪ್ರಕಾಶ್ ರೈ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಾಯಕತ್ವದ ಯುವರತ್ನ ಏಪ್ರಿಲ್ 1 ಕ್ಕೆ ಬಿಡುಗಡೆಯಾಗಲಿದೆ. ಸಂತೋಷ್ ಆನಂದರಾಮ್ ನಿರ್ದೇಶನದ ಈ ಸಿನಿಮಾಗೆ ಸಯ್ಯೇಶಾ ನಾಯಕಿ. ಈಗಾಗಲೇ ಚಿತ್ರದ ಟ್ರೇಲರ್ ಮತ್ತು ಹಾಡುಗಳು ಮನೆಮಾತಾಗಿವೆ. ಹೊಂಬಾಳೆ ಫಿಲಂಸ್ ಅಡಿಯಲ್ಲಿ ವಿಜಯ್ ಕಿರಗಂದೂರ್ ನಿರ್ಮಾಣದ ಈ ಚಿತ್ರದಲ್ಲಿ ಸೋನು ಗೌಡ, ಪ್ರಕಾಶ್ ರೈ ಮುಂತಾದವರು ನಟಿಸಿದ್ದು ಎಸ್ ತಮನ್ ಸಂಗೀತ ನೀಡಿದ್ದಾರೆ.