ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಸಂಸ್ಥೆ ಕೆಲ ಕನ್ನಡ ಸಿನಿರಸಿಕರ ವಿರೋಧ ಕಟ್ಟಿಕೊಂಡೇ ‘ಸಲಾರ್’ ಸಿನಿಮಾ ಮಾಡ್ತಿದ್ದಾರೆ. ಈಗಾಗಲೇ ಫಸ್ಟ್ ಶೆಡ್ಯೂಲ್ ಶೂಟಿಂಗ್ ಕೂಡ ಕಂಪ್ಲೀಟ್ ಆಗಿದ್ದು, ಶೀಘ್ರದಲ್ಲೇ ಸೆಕೆಂಡ್ ಶೆಡ್ಯೂಲ್ ಶುರುವಾಗ್ತಿದೆ. ಚಿತ್ರದಲ್ಲಿ ಬಾಹುಬಲಿ ಪ್ರಭಾಸ್ ಮಾಫಿಯಾ ಡಾನ್ ಅವತಾರದಲ್ಲಿ ಬಣ್ಣ ಹಚ್ಚಿದ್ದಾರೆ. ಪ್ರಶಾಂತ್ ನೀಲ್ ಎಲಿವೇಷನ್ ಮತ್ತು ಪ್ರಭಾಸ್ ಮಾಸ್ಯಿಸಂ ಮಿಕ್ಸ್ ಆದ್ರೆ, ಸಿನಿಮಾ ಯಾವ ರೇಂಜ್ನಲ್ಲಿ ಮೂಡಿ ಬರತ್ತೋ ಅಂತ ಅಭಿಮಾನಿಗಳು ಕಾಯ್ತಿದ್ದಾರೆ. ಶ್ರುತಿ ಹಾಸನ್ ಚಿತ್ರದಲ್ಲಿ ನಾಯಕಿಯಾಗಿ ಪ್ರಭಾಸ್ಗೆ ಸಾಥ್ ಕೊಡ್ತಿದ್ದಾರೆ.
‘ಸಲಾರ್’ ಸಿನಿಮಾ ಬಗ್ಗೆ ಒಂದು ಹೊಸ ನ್ಯೂಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗ್ತಿದೆ. ಚಿತ್ರದ ಎರಡು ಭಾಗಗಳಾಗಿ ಮೂಡಿ ಬರತ್ತೆ ಅನ್ನೋ ಸುದ್ದಿಯನ್ನ ಅದ್ಯಾರು ತೇಲಿಬಿಟ್ಟರೋ ಗೊತ್ತಿಲ್ಲ. ತೆಲುಗು ವೆಬ್ಸೈಟ್ಗಳಲ್ಲಿ ಈಗ ಇದೇ ಟ್ರೆಂಡಿಂಗ್. ಬಾಹುಬಲಿ ಸಿನಿಮಾ ಎರಡು ಭಾಗಗಳಾಗಿ ಬಂದಿದ್ದೇ ಬಂದಿದ್ದು. ದೊಡ್ಡ ದೊಡ್ಡ ಸಿನಿಮಾಗಳ ಕಥೆಯನ್ನ ವಿಸ್ತರಿಸಿ ಎರಡೆರಡು ಸಿನಿಮಾ ಮಾಡುವ ಸಾಹಸ ನಡೀತಿದೆ. ಕೆಜಿಎಫ್ ಸಿನಿಮಾ ಕೂಡ ಎರಡು ಭಾಗಗಳಾಗಿ ಬರ್ತಿದೆ. ಈಗಾಗಲೇ ಫಸ್ಟ್ ಚಾಪ್ಟರ್ ಹಿಟ್ ಆಗಿ ಸೆಕೆಂಡ್ ಚಾಪ್ಟರ್ ಕುತೂಹಲ ಕೆರಳಿಸಿದೆ. ಇತ್ತ ಆರ್. ಚಂದ್ರ ‘ಕಬ್ಜ’, ಅತ್ತ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಚಿತ್ರದ ಕಥೆಯನ್ನು ಎರಡು ಭಾಗಗಳಾಗಿ ಹೇಳುವ ಪ್ರಯತ್ನ ನಡೀತಿದೆ.
ಬಾಹುಬಲಿ, ಕೆಜಿಎಫ್, ಪುಷ್ಪ, ಕಬ್ಜ ನಂತರ ಸಲಾರ್ ಚಿತ್ರವನ್ನು ಎರಡು ಪಾರ್ಟ್ಗಳಲ್ಲಿ ಕಟ್ಟಿಕೊಡ್ತಾರೆ ಅನ್ನಲಾಗ್ತಿದೆ. ಆದರೆ ಇದು ಸುಳ್ಳು ಸುದ್ದಿ ಅನ್ನೋದು ಗೊತ್ತಾಗ್ತಿದೆ. ಪ್ರಭಾಸ್ ಸಲಾರ್ ಜೊತೆಗೆ ಆದಿಪುರುಷ್ ಮತ್ತು ನಾಗ್ಅಶ್ವಿನ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾಗಳನ್ನ ಒಪ್ಪಿಕೊಂಡಿದ್ದಾರೆ. ವಾರ್ ಸಿನಿಮಾ ನಿರ್ದೇಶಕ ಸಿದ್ದಾರ್ಥ್ ಆನಂದ್ ಜೊತೆಗೂ ಸಿನಿಮಾ ಮಾಡ್ತಾರೆ ಅನ್ನಲಾಗ್ತಿದೆ. ಇತ್ತ ಪ್ರಶಾಂತ್ ನೀಲ್ ಸಲಾರ್ ನಂತರ ಎನ್ಟಿಆರ್ ಜೊತೆ ಒಂದು ಸಿನಿಮಾ ಮಾಡ್ಬೇಕಿದೆ. ಯಶ್ ಜೊತೆಗೂ ಮತ್ತೊಂದು ಸಿನಿಮಾ ಮಾಡೋ ಸಾಧ್ಯತೆಯಿದೆ. ಮ್ಯಾಟರ್ ಹೀಗಿರುವಾಗ ಸಲಾರ್ನ ಎರಡು ಭಾಗಗಳಾಗಿ ಮಾಡ್ತಾ ಕೂರೋದಿಲ್ಲ. ಲಾಭದ ಲೆಕ್ಕಚಾರಾ ಹಾಕಿ ನೀಲ್, ಪ್ರಭಾಸ್, ಹೊಂಬಾಳೆ ಫಿಲ್ಮ್ಸ್ ಮನಸು ಮಾಡಿದ್ರೆ, ಏನು ಬೇಕಾದರೂ ಆಗಬಹುದು.