ಏಪ್ರಿಲ್ 02ರಂದು ಸರ್ಕಾರ ಕೊರೊನಾ ತಡೆಯಲು ಹೊಸ ರೂಲ್ಸ್ ತಂದಿದೆ. ಇದ್ರಲ್ಲಿ ಥಿಯೇಟರ್ಗಳಲ್ಲಿ ಶೇ.100ರಷ್ಟು ಸೀಟಿಗೆ ನಿರ್ಬಂಧ ಹೇರಲಾಗಿದೆ. ಅದ್ರಲ್ಲೂ ಕನ್ನಡ ಚಿತ್ರಗಳಿಗೆ ಅತೀ ಹೆಚ್ಚು ಗಳಿಕೆ ತಂದುಕೊಡೋ 8 ಜಿಲ್ಲೆಗಳಲ್ಲಿ ಈ ರೂಲ್ಸ್ ಜಾರಿಯಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಬಿಬಿಎಂಪಿ ವ್ಯಾಪ್ತಿಯಲ್ಲಿರೋ ಚಿತ್ರಮಂದಿರಗಳು, ಮೈಸೂರು, ಕಲಬುರ್ಗಿ, ದಕ್ಷಿಣ ಕನ್ನಡ, ಉಡುಪಿ, ಬೀದರ್, ಧಾರವಾಡ ಜಿಲ್ಲೆಯಲ್ಲಿ ಈ ರೂಲ್ಸ್ ಜಾರಿಯಲ್ಲಿರುತ್ತೆ. ಹೀಗಾಗಿ ಪುನೀತ್ ರಾಜ್ ಕುಮಾರ್ ಕೂಡ ಏಪ್ರಿಲ್ 02 ರಂದು ಬೇಸರ ವ್ಯಕ್ತಪಡಿಸಿದ್ದರು.
ರಾಜ್ಯ ಸರ್ಕಾರದ ವಿರುದ್ಧ ಅಪ್ಪು ಬೇಸರ ಹೊರ ಹಾಕುತ್ತಿದ್ದಂತೆ, ಅಭಿಮಾನಿಗಳು ಅಭಿಯಾನ ಶುರುಮಾಡಿದ್ದಾರೆ. ಲಾಕ್ಡೌನ್ ಆಗಿದ್ದಾಗ, ಸಿ.ಎಂ ಯಡಿಯೂರಪ್ಪ ಅವ್ರಿಗೆ 50 ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು. ಆದ್ರೀಗ, ಅದೇ ನಟನ ಸಿನಿಮಾ ರಿಲೀಸ್ ಆದಾಗ ರಾಜ್ಯ ಸರ್ಕಾರ ಶೇ.50ರಷ್ಟು ಸೀಟಿಗೆ ನಿರ್ಬಂಧ ಹೇರಿ ಅನ್ಯಾಯ ಮಾಡಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಸಿನಿಮಾ ವೀಕ್ಷಿಸೋದು ಜನರ ಆಯ್ಕೆ.. ಯಾವುದೇ ಪೂರ್ವ ಸೂಚನೆ ಇಲ್ಲದೆ ಏಕಾಏಕಿ ಥಿಯೇಟರ್ಗಳಲ್ಲಿ ಶೇ.50ರಷ್ಟು ಸೀಟಿ ಭರ್ತಿಗೆ ಆದೇಶ ನೀಡಿದ್ದು ಅನ್ಯಾಯ. ಸಿನಿಮಾವನ್ನೇ ನಂಬಿಕೊಂಡಿರೋ ನಿರ್ಮಾಪಕರು, ತಂತ್ರಜ್ಞರು, ಕಾರ್ಮಿಕರು ಎಲ್ಲಿಗೆ ಹೋಗ್ಬೇಕು ಅಂತ ಅಪ್ಪು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಉತ್ತಮ ಸಾಮಾಜಿಕ ಸಂದೇಶ ಸಾರುವ ಸಿನಿಮಾವನ್ನ ಕೊಲ್ಲಬೇಡಿ ಅಂತ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಏಪ್ರಿಲ್ 03ರೊಳಗೆ ಈಗ ನೀಡಿರುವ ಆದೇಶವನ್ನ ಹಿಂಪಡೆಯದೇ ಇದ್ದರೆ. ರಾಜ್ಯಾದ್ಯಂತ ಧರಣಿ ಹಾಗೂ ಪ್ರತಿಭಟನೆ ಮಾಡೋದಾಗಿ ಅಭಿಮಾನಿಗಳು ಎಚ್ಚರಿಕೆ ನೀಡಿದ್ದಾರೆ. ಎಲ್ಲೆಡೆ ಒತ್ತಡ ಹೆಚ್ಚಾಗಿರೋದ್ರಿಂದ ರಾಜ್ಯ ಸರ್ಕಾರ ಇಂದು ತನ್ನ ನಿರ್ಧಾರ ಬದಲಿಸಿಕೊಳ್ಳುತ್ತಾ ಅನ್ನೋದನ್ನ ಕಾದು ನೋಡ್ಬೇಕು.