ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ‘ವಕೀಲ್ ಸಾಬ್’ ಸಿನಿಮಾ ಟ್ರೈಲರ್ ಸೋಷಿಯಲ್ ಮೀಡಿಯಾನ ಶೇಕ್ ಮಾಡ್ತಿದೆ. ಬಾಲಿವುಡ್ನ ‘ಪಿಂಕ್’ ರೀಮೇಕ್ ಆಗಿರೋ ಈ ಚಿತ್ರದಲ್ಲಿ ಅಮಿತಾಬ್ ಮಾಡಿದ್ದ ಲಾಯರ್ ಪಾತ್ರವನ್ನ ಪವನ್ ಕಲ್ಯಾಣ್ ನಿಭಾಯಿಸಿದ್ದಾರೆ. ನಿನ್ನೆ ಸಂಜೆ ಯೂಟ್ಯೂಬ್ಗೆ ಅಪ್ಲೋಡ್ ಆದ ಟ್ರೈಲರ್ ದಾಖಲೆಗಳ ಮೇಲೆ ದಾಖಲೆ ಸೃಷ್ಟಿಸ್ತಿದೆ. ಮತ್ತೊಮ್ಮೆ ಪವರ್ ಸ್ಟಾರ್ ಕ್ರೇಜ್ ಏನು ಅನ್ನೋದನ್ನ ಸಾಬೀತು ಮಾಡಿ ತೋರಿಸ್ತಿದೆ. ಕೆಲ ಥಿಯೇಟರ್ಗಳಲ್ಲೂ ‘ವಕೀಲ್ ಸಾಬ್’ ಟ್ರೈಲರ್ ಪ್ರದರ್ಶನ ಮಾಡಲಾಗಿತ್ತು. ಅಭಿಮಾನಿಗಳು ಮುಗಿಬಿದ್ದು ಟ್ರೈಲರ್ ನೋಡ್ತಿದ್ದಾರೆ. 14 ಗಂಟೆಗಳಲ್ಲಿ 12 ಮಿಲಿಯನ್ಗೂ ಹೆಚ್ಚು ವೀವ್ಸ್ ಸಾಧಿಸಿ ದಾಖಲೆ ಬರೆದಿದೆ. ‘ಬಾಹುಬಲಿ-2′ ಸಿನಿಮಾ ಟ್ರೈಲರ್ 10 ಗಂಟೆಗಳಲ್ಲಿ 4 ಲಕ್ಷ ಲೈಕ್ಸ್ ಗಿಟ್ಟಿಸಿತ್ತು. ಆದರೆ ‘ವಕೀಲ್ ಸಾಬ್’ ಟ್ರೈಲರ್ ಬರೀ 71 ನಿಮಿಷದಲ್ಲಿ 4 ಲಕ್ಷ ಲೈಕ್ಸ್ ಪಡೆದು ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಸದ್ಯ 24 ಗಂಟೆಯೊಳಗೆ 1 ಮಿಲಿಯನ್ ಲೈಕ್ಸ್ ವಾಕೀಲ್ ಸಾಬ್ ಮುಡಿಗೇರಿದೆ.
‘ಪಿಂಕ್’ ಮಹಿಳಾ ಪ್ರಧಾನ ಸಿನಿಮಾ. ಅಮಿತಾಬ್ ಬಚ್ಚನ್ ಅಲ್ಲಿ ಒಂದು ಪಾತ್ರವಾಗಿ ಅಭಿನಯಿಸಿದ್ದರು. ಆದರೆ ತೆಲುಗಿನಲ್ಲಿ ಪವನ್ ಕಲ್ಯಾಣ್ ಇಮೇಜ್ಗೆ ತಕ್ಕಂತೆ ಒಂದಷ್ಟು ಕಮರ್ಷಿಯಲ್ ಅಂಶಗಳನ್ನ ಸೇರಿಸಿ, ನಿರ್ದೇಶಕ ವೇಣು ಶ್ರೀರಾಮ್ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಮೂವರು ಅಮಾಯಕ ಹೆಣ್ಣು ಮಕ್ಕಳಿಗೆ ನ್ಯಾಯಾಲಯದಲ್ಲಿ ನ್ಯಾಯ ಕೊಡಿಸುವ ನಾಯಕನಾಗಿ ಪವನ್ ಮಿಂಚಿದ್ದಾರೆ. ಪವನ್ ನಟನೆಯ ‘ಅಜ್ಞಾತವಾಸಿ’ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ಸೋತಿತ್ತು. 3 ವರ್ಷಗಳ ಗ್ಯಾಪ್ ನಂತ್ರ ಮತ್ತೆ ‘ವಕೀಲ್ ಸಾಬ್’ ಸಿನಿಮಾ ಮೂಲಕ ಪವರ್ ಸ್ಟಾರ್ ಪ್ರೇಕ್ಷಕರನ್ನ ರಂಜಿಸೋಕೆ ಬರ್ತಿದ್ದಾರೆ. ಟ್ರೈಲರ್ನಿಂದ್ಲೇ ಸಿನಿಮಾ ದೊಡ್ಡಮಟ್ಟದಲ್ಲಿ ಹೈಪ್ ಕ್ರಿಯೇಟ್ ಮಾಡಿದೆ. ದಿಲ್ ರಾಜು ನಿರ್ಮಾಣದ ‘ವಕೀಲ್ ಸಾಬ್’ ಚಿತ್ರದಲ್ಲಿ ನೊಂದ ಯುವತಿಯರ ಪಾತ್ರದಲ್ಲಿ ನಿವೇತಾ ಥಾಮಸ್, ಅಂಜಲಿ, ಅನನ್ಯಾ ನಗಾಲ್ಲ ಬಣ್ಣ ಹಚ್ಚಿದ್ದಾರೆ. ಪ್ರಕಾಶ್ ರೈ ಸಹ ಕೀ ರೋಲೊಂದನ್ನ ಪ್ಲೇ ಮಾಡಿದ್ದಾರೆ. ಪವನ್ ಕಲ್ಯಾಣ್ ಜೋಡಿಯಾಗಿ ಶ್ರುತಿ ಹಾಸನ್ ಕಾಣಿಸಿಕೊಂಡಿದ್ದಾರೆ.
ಏಪ್ರಿಲ್ 9ರಂದು ‘ವಕೀಲ್ ಸಾಬ್’ ಸಿನಿಮಾ ದೊಡ್ಡಮಟ್ಟದಲ್ಲಿ ರಿಲೀಸ್ ಆಗ್ತಿದೆ. ಲಾಕ್ಡೌನ್ ನಂತ್ರ ಟಾಲಿವುಡ್ನಲ್ಲಿ ರಿಲೀಸ್ ಆಗ್ತಿರೋ ದೊಡ್ಡ ಸಿನಿಮಾ ಇದು. ಹಾಗಾಗಿ ಸಹಜವಾಗಿಯೇ ‘ವಕೀಲ್ ಸಾಬ್’ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಟ್ರೈಲರ್, ಸಾಂಗ್ಸ್ ಸೂಪರ್ ಹಿಟ್ ಆಗಿ ಮತ್ತಷ್ಟು ಬಲ ತುಂಬಿದೆ. ಎಸ್. ತಮನ್ ಮ್ಯೂಸಿಕ್ ‘ವಕೀಲ್ ಸಾಬ್’ ಚಿತ್ರದ ಮತ್ತೊಂದು ಹೈಲೆಟ್. ಕೊರೋನಾ 2ನೇ ಅಲೆ ಜೋರಾಗುತ್ತಿರುವ ಸಮಯದಲ್ಲೇ ಸಿನಿಮಾ ರಿಲೀಸ್ ಆಗ್ತಿದ್ದು, ಪವರ್ ಸ್ಟಾರ್ ಆರ್ಭಟಕ್ಕೆ ಸಕ್ಸಸ್ ಸಿಗುತ್ತಾ ಕಾದು ನೋಡಬೇಕು.