ಇರಾನಿ ಮೂಲದ ಸಿನಿಮಾ ನಿರ್ದೇಶಕನೊಬ್ಬ ಹೆತ್ತವರ ಕೋಪಕ್ಕೆ ತನ್ನ ಜೀವವನ್ನೇ ತೊರೆಯಬೇಕಾದ ಸಂದರ್ಭ ಬಂದಿದೆ. 47 ವರ್ಷದ ಈತ ಮದುವೆಯಾಗದೇ ಅವಿವಾಹಿತನಾಗಿ ಉಳಿದ ಕಾರಣಕ್ಕೆ ಕೋಪಗೊಂಡ ಹೆತ್ತವರು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಕೊಲೆಯ ನಂತರ ಮೃತದೇಹವನ್ನು ತುಂಡು ತುಂಡು ಮಾಡಿ ಕಸದ ಬುಟ್ಟಿಗೆ ಎಸೆದಿದ್ದಾರೆ.
ಇಂಥದ್ದೊಂದು ಭಯಾನಕ ಘಟನೆ ಬ್ರಿಟನ್ ನಲ್ಲಿ ನಡೆದಿದ್ದು ಕೊಲೆಯಾದ ವ್ಯಕ್ತಿ ಇರಾನಿನ ಸಿನಿಮಾ ನಿರ್ದೇಶಕ ಬಾಬಕ್ ಖೋರಮ್ದೀನ್. ಇರಾನ್ ಮೂಲದ ಬಾಬಕ್ ಪೋಷಕರ ಜತೆ ಲಂಡನ್ನಲ್ಲಿ ವಾಸವಾಗಿದ್ದರು. ಟೆಹ್ರಾನ್ ವಿಶ್ವವಿದ್ಯಾಲಯದಲ್ಲಿ ಫಿಲ್ಮ್ ಮೇಕಿಂಗ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಅವರು ಮದುವೆಯಾಗಿರಲಿಲ್ಲ.
ಇದೇ ವಿಚಾರವಾಗಿ ಬಾಬಕ್ ಮತ್ತು ಪೋಷಕರ ನಡುವೆ ಸದಾ ಜಗಳವಾಗುತ್ತಿತ್ತಂತೆ. ಇನ್ನೂ ಮಗನಿಗೆ ಮದುವೆ ಮಾಡಿಲ್ಲ ಎಂದು ಎಲ್ಲರೂ ಕೇಳುತ್ತಿದ್ದರಿಂದ ನಮಗೆ ಅವಮಾನವಾಗುತ್ತಿತ್ತು. ನಮಗೆ ಆತ ಕಿರುಕುಳ ನೀಡುತ್ತಿದ್ದ, ನಮ್ಮ ಪ್ರಾಣಕ್ಕೆ ಅಪಾಯವಿತ್ತು. ನಾವು ಸುರಕ್ಷಿತವಾಗಿ ಇರಲಿಲ್ಲ. ಇದೇ ಕಾರಣಕ್ಕೆ ಮಗನನ್ನು ಕೊಲೆ ಮಾಡಿದೆವು ಎಂದು ಪೋಲೀಸರಿಗೆ ಹೇಳಿದ್ದಾರೆ. ಅವರ ಈ ಮಾತುಗಳನ್ನು ಕೇಳಿ ಪೋಲೀಸರು ಕೂಡಾ ಒಂದು ಕ್ಷಣ ದಂಗಾಗಿದ್ದಾರೆ.
2010ರಲ್ಲಿ ಬಾಬಕ್ ಲಂಡನ್ಗೆ ಹೋಗಿದ್ದರು. ನಂತರ ಇರಾನ್ಗೆ ವಾಪಸ್ ಬಂದು ಸಿನಿಮಾ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದರು. ಬಾಬಕ್ ಕೊಲೆಯನ್ನು ಮರ್ಯಾದಾ ಹತ್ಯೆ ಎಂದು ಪರಿಗಣಿಸಲಾಗುತ್ತಿದೆ. ಹಲವು ಕಿರುಚಿತ್ರಗಳನ್ನು ನಿರ್ದೇಶಿಸುವ ಮೂಲಕ ಬಾಬಕ್ ಜನಪ್ರಿಯರಾಗಿದ್ದರು. ಆದರೆ ಮಗನನ್ನೇ ಕೊಲೆ ಮಾಡಿದರೂ ನಮ್ಮ ಗೌರವಕ್ಕಾಗಿ ಈ ಹತ್ಯೆ ಮಾಡಿದ್ದೇವೆ, ನಮಗೆ ಅದರ ಬಗ್ಗೆ ಯಾವುದೇ ಪಶ್ಚಾತ್ತಾಪ ಇಲ್ಲ ಎಂದಿದ್ದಾರೆ ಆ ಪೋಷಕರು. ಪ್ರತಿಭಾವಂತ ನಿರ್ದೇಶಕನೊಬ್ಬ ಕ್ಷುಲ್ಲಕ ಕಾರಣಗಳಿಗಾಗಿ ಸಾವನ್ನಪ್ಪಿದ್ದು ದುರಂತ ಎಂದು ಇರಾನಿನ ಪತ್ರಿಕೆಗಳು ವರದಿ ಮಾಡಿವೆ.