ಕಿಚ್ಚ ಸುದೀಪ್ ನಟಿಸಿರೋ ವಿಕ್ರಾಂತ್ ರೋಣ ಸ್ಯಾಂಡಲ್ವುಡ್ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ. ಈಗಾಗ್ಲೇ ದೊಡ್ಡ ಮಟ್ಟದಲ್ಲಿ ಸಿನಿಮಾ ಸದ್ದು ಮಾಡುತ್ತಿದೆ. ಈ ಮೆಗಾ ಬಜೆಟ್ ಸಿನಿಮಾ 14 ಭಾಷೆಗಳಲ್ಲಿ 55 ದೇಶಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಅಭಿನಯ ಚಕ್ರವರ್ತಿಯ ಹುಟ್ಟುಹಬ್ಬದ ಸಂಭ್ರಮಕ್ಕೆ ವಿಕ್ರಾಂತ್ ರೋಣ ಸಿನಿಮಾ ಫಸ್ಟ್ ಗ್ಲಿಮ್ಸ್ ಬಿಡುಗಡೆಯಾಗಿದ್ದು, ಕಿಚ್ಚನ ಅಭಿಮಾನಿಗಳಿಗೆ ಥ್ರಿಲ್ ಕೊಟ್ಟಿದೆ.
‘ದಿ ಡೆಡ್ ಮಾನ್ಸ್ ಆ್ಯಂಥಮ್’ ನಿರೂಪಕನ ಧ್ವನಿಯನ್ನು ಹಿಂಬಾಲಿಸುತ್ತ ಕಗ್ಗತ್ತಲೆಯ ಲೋಕದೊಳಗೆ ಸಾಗುತ್ತದೆ. ಈ ಲೋಕದೊಳಗೆ ಸುದೀಪ್ ಎಂಟ್ರಿ ಕೊಡುತ್ತಿದ್ದಂತೆ ಶತ್ರುಗಳಿಗೆ ಭಯ ಹುಟ್ಟಿಸುವ ಸನ್ನಿವೇಶ ಎದುರಾಗುತ್ತದೆ. ಭಯ ಹುಟ್ಟಿಸುವ ಸನ್ನಿವೇಶ, ವಿಸ್ಮಯಗೊಳಿಸುವ ಹಿನ್ನೆಲೆ ಸಂಗೀತ ನೋಡಿದ್ರೆ, ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡೋದು ಗ್ಯಾರಂಟಿ.
‘ದಿ ಡೆಡ್ ಮಾನ್ಸ್ ಆ್ಯಂಥಮ್ ಸುದೀಪ್ ಹುಟ್ಟುಹಬ್ಬದ ದಿನ ರಿಲೀಸ್ ಆಗುತ್ತಿರುವುದು ನನಗೆ ಬಹಳ ಖುಷಿಯಾಗಿದೆ. ವಿಕ್ರಾಂತ್ ರೋಣ ಪಾತ್ರದ ನಿಗೂಢತೆಯನ್ನು ಫಸ್ಟ್ ಗ್ಲಿಂಪ್ಸ್ ಅದ್ಭುತವಾಗಿ ಸೆರೆ ಹಿಡಿದಿದೆ. ಕಿಚ್ಚ ಸುದೀಪ್ಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ವಿಕ್ರಾಂತ್ ರೋಣ ನಿರ್ದೇಶಕ ಅನೂಪ್ ಭಂಡಾರಿ ಹಾರೈಸಿದ್ದಾರೆ.
ಇನ್ನು ಜಾಕ್ ಮಂಜುನಾಥ್ ವಿಕ್ರಾಂತ್ ರೋಣ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ವಿಕ್ರಾಂತ್ ರೋಣ, ಒಂದು ಬಹುಭಾಷಾ ಆಕ್ಷನ್ ಅಡ್ವೆಂಚರ್ ಚಿತ್ರ. 55 ದೇಶಗಳಲ್ಲಿ, 14 ಭಾಷೆಗಳಲ್ಲಿ 3-Dಯಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಅಜನೀಶ್ ಬಿ. ಲೋಕ್ನಾಥ್ ಹಿನ್ನಲೆ ಸಂಗೀತ ನೀಡಿದ್ದಾರೆ. ಖ್ಯಾತ ಪ್ರಶಸ್ತಿಗಳ ವಿಜೇತರಾದ, ಕಲಾ ನಿರ್ದೇಶಕ ಶಿವಕುಮಾರ್ ಹಾಗೂ ಛಾಯಗ್ರಾಹಕ ವಿಲಿಯಮ್ ಡೇವಿಡ್ ಕೈಚಳಕವಿದೆ. ವಿಕ್ರಾಂತ್ ರೋಣನಿಗೆ ನಿರೂಪ್ ಭಂಡಾರಿ, ನೀತಾ ಅಶೋಕ್ ಹಾಗೂ ಜಾಕ್ವೆಲಿನ್ ಫರ್ನಾಂಡಿಸ್ ಜೊತೆಯಾಗಿದ್ದಾರೆ.