ಕೊರೊನಾ ಎರಡನೇ ಅಲೆ ಚಿತ್ರರಂಗದ ಮೇಲೆ ದೊಡ್ಡ ಪರಿಣಾಮ ಬೀರಿದೆ. ಇದಕ್ಕೆ ಸಾಕ್ಷಿಯಾಗಿದ್ದು ಮಾತ್ರ ಈ ವಾರ ಬಿಡುಗಡೆಯಾದ ಬ್ಯಾಂಡ್ಮಿಂಟನ್ ತಾರೆ ಸೈನಾ ನೆಹ್ವಾನ್ ಜೀವನಗಾಥೆಯನ್ನು ತೆರೆ ಮೇಲೆ ಮೂಡಿಸಿದ ಈ ಚಿತ್ರವನ್ನು ನೋಡೋಕೆ ಥಿಯೇಟರ್ ಗೆ ಜನರೇ ಬಂದಿಲ್ಲ. ಬಹುತೇಕ ಥಿಯೇಟರ್ ಗಳು ಸಂಪೂರ್ಣವಾಗಿ ಖಾಲಿ ಹೊಡೆದಿದ್ದು ಕೆಲವು ಕಡೆ ಬೆರಳೆಣಿಕೆಯಷ್ಟು ಜನ ಚಿತ್ರಮಂದಿರಗಳಿಗೆ ಆಗಮಿಸಿದ್ದಾರೆ. ಇದು ಬಹುಶಃ ಬಾಲಿವುಡ್ ನ ಮೇನ್ ಸ್ಟ್ರೀಂ ಸಿನಿಮಾವೊಂದಕ್ಕೆ ಕೊರೊನಾ ಎರಡನೇ ಅಲೆ ಕೊಟ್ಟ ಬಹು ದೊಡ್ಡ ಏಟು ಎನ್ನಲಾಗಿದೆ.


ಮಹಾರಾಷ್ಟ್ರದ ಕೆಲವೆಡೆ ಮತ್ತು ಉತ್ತರದ ಅನೇಕ ರಾಜ್ಯಗಳಲ್ಲಿ ಮತ್ತೆ ಲಾಕ್ ಡೌನ್ ಶುರುವಾಗಿದೆ. ಅಲ್ಲದೇ ಸಿನಿಮಾ ಥಿಯೇಟರ್ ಗಳಲ್ಲಿ 50% ಸೀಟುಗಳಿಗೆ ಮಾತ್ರ ಅವಕಾಶ ನೀಡಲಾಗ್ತಿದೆ. ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗಿದ್ದರಿಂದ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿ ಮಾಡಲಾಗ್ತಿದೆ. ಈ ಹಿನ್ನಲೆಯಲ್ಲಿ ಜನರ ಓಡಾಟದ ಮೇಲೆಯೂ ನಿರ್ಬಂಧ ಹೇರಿದಂತಾಗಿದೆ. ಇದು ಚಿತ್ರದ ಓಟಕ್ಕೆ ದೊಡ್ಡ ಪೆಟ್ಟು ಕೊಟ್ಟಿದೆ ಎನ್ನುತ್ತಿದೆ ಚಿತ್ರತಂಡ.
ಆದ್ರೆ ಈ ಸಿನಿಮಾ ಬಿಡುಗಡೆಯಾದ ನಂತರವಷ್ಟೇ ನೈಟ್ ಕರ್ಫ್ಯೂ ಜಾರಿಯಾಗಿದ್ದು. ಹಾಗಾಗಿ ಒಟ್ಟಾರೆ ಸಿನಿಮಾ ಮೇಲೆಯೇ ವಹಿವಾಟು ಬಹಳ ನೀರಸವಾಗಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಟೀಸರ್ ಮತ್ತು ಟ್ರೇಲರ್ ಗಳು ಕೂಡಾ ಸೈನಾ ಚಿತ್ರಕ್ಕೆ ಹೆಚ್ಚೇನೂ ಸಹಾಯ ಮಾಡಿರಲಿಲ್ಲ. ಚಿತ್ರದ ಕಥೆಯ ಬರವಣಿಗೆಯಲ್ಲಿ ಮತ್ತಷ್ಟು ಹಿಡಿತ ಇರಬೇಕಿತ್ತು ಎನ್ನುತ್ತಾರೆ ವಿಮರ್ಶಕರು. ಆದ್ರೆ ಪರಿಣೀತಿ ಛೋಪ್ರಾ ಅಭಿನಯಕ್ಕೆ ವಿಮರ್ಶಕರಿಂದ ಉತ್ತಮ ಅಂಕಗಳು ದೊರೆತಿವೆ. ಏನೇ ಇದ್ರೂ ಇಷ್ಟೊಂದು ಶ್ರಮ ಮತ್ತು ಹಣ ಹೂಡಿ ಮಾಡಿದ ಸಿನಿಮಾ ಈ ಪಾಟಿ ನೆಲಕಚ್ಚಿದ್ದು ಸಿನಿಮಾ ತಯಾರಕರನ್ನು ಆತಂಕ ಮತ್ತು ನಿರಾಸೆಗೆ ತಳ್ಳಿದೆ.