ಕೇಂದ್ರ ಸರ್ಕಾರದ ನೋ ಸ್ಮೋಕಿಂಗ್ ಜಾಹೀರಾತಿನಲ್ಲಿ ಕಂಡಿದ್ದ ಬಾಲನಟಿಯನ್ನ ಎಲ್ಲರೂ ನೋಡಿರ್ತಿರ. ಈಗ ಅದೇ ಬಾಲನಟಿ ನಾಯಕಿಯಾಗಿ ಕನ್ನಡ ಚಿತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಸಿಮ್ರಾನ್ ನಾಟೇಕರ್ ಬರ್ಕ್ಲಿ ಅನ್ನೋ ಚಿತ್ರದಲ್ಲಿ ನಟಿಸಿದ್ದು, ಏಪ್ರಿಲ್ 30ರಂದು ಟೀಸರ್ ಬಿಡುಗಡೆಯಾಗುತ್ತಿದೆ.
‘ಬರ್ಕ್ಲಿ’ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಕರಿಯ ಚಿತ್ರದ ನಿರ್ಮಾಪಕ ಆನೇಕಲ್ ಬಾಲರಾಜ್ ನಿರ್ಮಿಸ್ತಿರೋ ‘ಬರ್ಕ್ಲಿ’ಯ ಅದ್ದೂರಿ ಟೀಸರ್ ಏಪ್ರಿಲ್ 30 ರ ಸಂಜೆ 5 ಗಂಟೆ ರಿಲೀಸ್ ಆಗ್ತಿದೆ. ಬಾಲರಾಜ್ ಅವರ ಪುತ್ರ ಸಂತೋಷ್ ನಾಯಕನಾಗಿ ನಟಿಸಿರೋ ಬರ್ಕ್ಲಿ ಚಿತ್ರದ ಚಿತ್ರೀಕರಣ ಈಗಾಗ್ಲೇ ಮುಕ್ತಾಯವಾಗಿದೆ. ಸದ್ಯದಲ್ಲೇ ಫಸ್ಟ್ ಕಾಪಿ ಕೂಡ ಸಿದ್ದವಾಗಲಿದೆ.
ಕರಿಯ, ಗಣಪ, ಕರಿಯ ೨ ಚಿತ್ರಗಳನ್ನು ನಿರ್ಮಿಸಿರುವ ಆನೇಕಲ್ ಬಾಲರಾಜ್ ನಿರ್ಮಾಣದಲ್ಲಿ ಮೂಡಿ ಬರ್ತ್ತಿರೋ ಮತ್ತೊಂದು ಅದ್ಧೂರಿ ಚಿತ್ರವಿದು. ಉತ್ತಮ ಮನೋರಂಜನೆಯ ಈ ಚಿತ್ರಕ್ಕೆ ಸುಮಂತ್ ಕ್ರಾಂತಿ ಅವ್ರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
‘‘ಬರ್ಕ್ಲಿ ಎಂದ ಕೂಡ್ಲೇ ಸಿಗರೇಟ್ ಒಂದರ ಹೆಸರು ಎಂದುಕೊಳ್ಳೋದು ಸಹಜ. ಆದ್ರೆ ‘ಬರ್ಕ್ಲಿ’ ಚಿತ್ರಕ್ಕೂ ಸಿಗರೇಟ್ಗೂ ಯಾವುದೇ ಸಂಬಂಧವಿಲ್ಲ. ನಮ್ಮ ಚಿತ್ರದ ಶೀರ್ಷಿಕೆಯ ಅರ್ಥವೇ ಬೇರೆ’’ ಎನ್ನುತ್ತಾರೆ ನಿರ್ದೇಶಕ ಸುಮಂತ್ ಕ್ರಾಂತಿ.
ಬಹುಭಾಷಾ ನಟ ಚರಣರಾಜ್, ಖ್ಯಾತ ನಟಿ ಶೃತಿ, ಬಲ ರಾಜವಾಡಿ , ಬುಲೆಟ್ ಪ್ರಕಾಶ್ ಮುಂತಾದವರ ತಾರಾಬಳಗ ಈ ಚಿತ್ರದಲ್ಲಿದೆ. ಬಹದ್ದೂರ್ ಚೇತನ್ ಕುಮಾರ್, ಅಭಿ ಕನಸಿನ ಕವನ ಈ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಹೆಸರಾಂತ ಸಂಗೀತ ನಿರ್ದೇಶಕ ಜ್ಯೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಕೃಷ್ಣಕುಮಾರ್, ಎನ್.ಎಂ.ಸೂರಿ ಛಾಯಾಗ್ರಹಣ, ಅಮಿತ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನವಿದೆ.