ತಮ್ಮ ಮದುವೆಯ ಮೊದಲನೆಯ ವಾರ್ಷಿಕೋತ್ಸವದ ದಿನವೇ ‘ಜಾಗ್ವಾರ್’ ನಿಖಿಲ್ ಕುಮಾರಸ್ವಾಮಿ ಕೊರೊನಾ ಸೋಂಕು ದೃಢಪಟ್ಟಿತ್ತು. ನಿಖಿಲ್ ಅಭಿಮಾನಿಗಳು ಮತ್ತು ಕುಟುಂಬಸ್ಥರು ಕೂಡಾ ಖುಷಿಯಾಗಿರಬೇಕಾದ ದಿನ ಐಸೊಲೇಶನ್ ನಲ್ಲಿ ಇರಬೇಕಾಯ್ತಲ್ಲಾ ಎಂದು ಬೇಸರ ವ್ಯಕ್ತಪಡಿಸಿದ್ರು. ಖುದ್ದು ನಿಖಿಲ್ ಎಲ್ಲರಿಗೂ ಸಮಾಧಾನ ಹೇಳಿದ್ರು.
ಇದೆಲ್ಲಾ ಆಗಿ ಕೆಲವು ದಿನಗಳು ಕಳೆದಿವೆ ಅಷ್ಟೇ. ಆಗಲೇ ನಿಖಿಲ್ ಸುತ್ತಮುತ್ತಲಿನ ಮತ್ತಷ್ಟು ಜನರಲ್ಲಿ ಸೋಂಕು ದೃಢಪಟ್ಟಿದೆ. ನಿಖಿಲ್ ಸಹಾಯಕ, ಮೇಕಪ್ ಮ್ಯಾನ್ ಮತ್ತು ಬೌನ್ಸರ್ ಸೇರಿ ಅವರ ಮನೆಯ ಒಟ್ಟು 6 ಸಿಬ್ಬಂದಿಗೆ ಕೊರೊನಾ ಸೋಂಕು ಧೃಢವಾಗಿದೆ. ಸದ್ಯ ಇವರಲ್ಲಿ ಯಾರಿಗೂ ತೀವ್ರವಾದ ಲಕ್ಷಣಗಳು ಇಲ್ಲದೇ ಇರುವುದರಿಂದ ತಕ್ಷಣವೇ ಎಲ್ಲರಿಗೂ ಚಿಕಿತ್ಸೆ ನೀಡಲಾಗ್ತಿದೆ.
ಇದಲ್ಲದೆ ನಿಖಿಲ್ ಮುಂದಿನ ಚಿತ್ರ ‘ರೈಡರ್’ ಚಿತ್ರದ ನಿರ್ದೇಶಕ ವಿಜಯ್ಕುಮಾರ್ ಮತ್ತು ಕ್ಯಾಮೆರಾ ಮ್ಯಾನ್ ಗೂ ಕೊರೋನಾ ಸೋಂಕು ದೃಢಪಟ್ಟಿದೆ. ಇವರೊಂದಿಗೆ ಚಿತ್ರತಂಡದ ಇನ್ನೂ ಇಬ್ಬರು ಸಹಾಯಕರಿಗೂ ಕೊರೋನಾ ಪಾಸಿಟಿವ್ ಎಂದು ತಿಳಿದುಬಂದಿದೆ. ಸದ್ಯಕ್ಕಂತೂ ಕೊರೊನಾ ಕರಿಛಾಯೆ ರೈಡರ್ ಮೇಲೂ ಬಿದ್ದಿದೆ. ಹಾಗಾಗಿ ಚಿತ್ರದ ಕೆಲಸ ಹಠಾತ್ತನೆ ನಿಂತುಹೋಗಿದೆ.
ಕೊರೊನಾ ಸೋಂಕು ಅತ್ಯಂತ ವೇಗವಾಗಿ ಎಲ್ಲರಿಗೂ ಹರಡುತ್ತಿದೆ. ಹಾಗಾಗಿ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು ಎನ್ನುವಂಥಾ ಪರಿಸ್ಥಿತಿ ಇದೆ. ತನ್ನ ಸುತ್ತಮುತ್ತಲೇ ಇಷ್ಟೊಂದು ಜನ ಈ ಸೋಂಕಿನಿಂದ ಬಳಲುತ್ತಿದ್ದಾರೆ. ಸಾಮಾನ್ಯ ಜನ ಅತೀ ಹೆಚ್ಚು ಎಚ್ಚರಿಕೆ ವಹಿಸಿ ಎಂದು ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.