ಒಂದಷ್ಟು ಸಮಯ ಚಿತ್ರಗಳಿಂದ ಬ್ರೇಕ್ ತೆಗೆದುಕೊಂಡಿದ್ರು ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್. ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ರು. ‘ಅಜ್ಞಾತವಾಸಿ’ ಅವರು ಅಭಿನಯಿಸಿದ ಕೊನೆಯ ಚಿತ್ರ. ಹೀನಾಯವಾಗಿ ಸೋಲು ಕಂಡ ಈ ಚಿತ್ರದ ನಂತರ ಪವನ್ ಕಲ್ಯಾಣ್ ಕೂಡಾ ಅಜ್ಞಾತವಾಗಿಬಿಟ್ಟಿದ್ರು. ಆದ್ರೆ ಈಗ ಒಂದರ ಹಿಂದೆ ಒಂದರಂತೆ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗ್ತಿದ್ದಾರೆ ಈ ನಟ.
ಪವನ್ ಮುಂದಿನ ಚಿತ್ರದಲ್ಲಿ ಕನ್ನಡ ಮೂಲದ ನಟಿ ನಿತ್ಯಾ ಮೆನನ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ನಿತ್ಯಾ ಇದರಲ್ಲಿ ನಾಯಕಿಯ ಪಾತ್ರ ನಿರ್ವಹಿಸ್ತಿಲ್ಲ. ಬದಲಿಗೆ ಮತ್ತೊಂದು ಪ್ರಮುಖ ಪಾತ್ರ ಮಾಡ್ತಿದ್ದಾರೆ. ಚಿತ್ರದ ಓಟಕ್ಕೆ ಈ ಪಾತ್ರ ಬಹಳ ಮಹತ್ವದ್ದಾಗಿದೆಯಂತೆ. ಅಂದ್ಹಾಗೆ ನಿತ್ಯಾ ಮೆನನ್ ಮತ್ತು ಪವನ್ ಕಲ್ಯಾಣ್ ಇದೇ ಮೊದಲ ಬಾರಿಗೆ ಜೊತೆಯಾಗಿ ನಟಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ‘ವಕೀಲ್ ಸಾಬ್’ ಚಿತ್ರದ ಶೂಟಿಂಗ್ ಮುಗಿಸಿದ್ದಾರೆ ಪವರ್ ಸ್ಟಾರ್. ನಂತರ ‘ಹರಿಹರ ವೀರ ಮಲ್ಲು’ ಎನ್ನುವ ಐತಿಹಾಸಿಕ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ. ಇದರ ಜೊತಗೇ ಮಲಯಾಳಂ ನ ಸೂಪರ್ ಹಿಟ್ ಚಿತ್ರ ‘ಅಯ್ಯಪ್ಪನುಂ ಕೋಶಿಯುಂ’ ರೀಮೇಕ್ ನಲ್ಲೂ ಕಾಣಿಸಿಕೊಳ್ಳೋಕೆ ಸಜ್ಜಾಗಿದ್ದಾರೆ ಪವನ್ ಕಲ್ಯಾಣ್.
ಪೃಥ್ವಿರಾಜ್ ಸುಕುಮಾರನ್ ಮತ್ತು ಬಿಜು ಮೆನನ್ ನಟಿಸಿದ್ದ ಪಾತ್ರಗಳನ್ನು ತೆಲುಗಿನಲ್ಲಿ ರಾಣಾ ದಗ್ಗುಬಾಟಿ ಮತ್ತು ಪವನ್ ಕಲ್ಯಾಣ್ ನಟಿಸಲಿದ್ದಾರೆ. ಪೋಲಿಸ್ ಅಧಿಕಾರಿ ಪಾತ್ರದಲ್ಲಿ ಮತ್ತೊಮ್ಮೆ ಮಿಂಚಲಿದ್ದಾರೆ ಗಬ್ಬರ್ ಸಿಂಗ್. ರಾಣಾ ದಗ್ಗುಬಾಟಿಯ ಪತ್ನಿಯ ಪಾತ್ರದಲ್ಲಿ ನಿತ್ಯಾ ಮೆನನ್ ಕಾಣಿಸಿಕೊಳ್ಳಲಿದ್ದಾರೆ. ಪವನ್ ಕಲ್ಯಾಣ್ ಪತ್ನಿಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಲಿದ್ದಾರೆ ಎನ್ನಲಾಗಿದೆ.
ನಿತ್ಯಾ ಮೆನನ್ ಬಹುಭಾಷಾ ನಟಿ. ಮೂಲ ಕನ್ನಡತಿಯಾಗಿರೋ ಈ ಚೆಲುವೆ ತನ್ನ ನಟನಾ ವೃತ್ತಿ ಆರಂಭಿಸಿದ್ದೂ ಕನ್ನಡದ ‘ಜೋಶ್’ ಸಿನಿಮಾ ಮೂಲಕ. ನಂತರ ಉಸ್ತಾದ್ ಹೋಟೆಲ್, ಇಷ್ಕ್, ಒಕೆ ಕಣ್ಮಣಿ ಮುಂತಾದ ಚಿತ್ರಗಳಲ್ಲಿ ಗಮನ ಸೆಳೆದ ಅದ್ಭುತ ಕಲಾವಿದೆ ಈಕೆ. ಈಗ ಬಹು ತಾರಾಗಣದ ಈ ಚಿತ್ರದಲ್ಲಿ ನಟಿಸ್ತಿರೋದು ಅವರಿಗೂ ಖುಷಿ ಕೊಟ್ಟಿದೆ.