ಗುರುಶಿಷ್ಯರು ಅಂದ್ಕೊಡ್ಲೇ ಮೊದಲು ನೆನಪಾಗೋದು ದ್ವಾರಕೀಶ್ ಅಭಿನಯದ ಸಿನಿಮಾ. ಆದ್ರೀಗ ಇದೇ ಹೆಸರಿನ ಮತ್ತೊಂದು ಸಿನಿಮಾ ಶುರುವಾಗಿರೋದು ಗೊತ್ತೇ ಇದೆ. ಕಾಮಿಡಿ ಕಿಂಗ್ ಶರಣ್ ಲೀಡ್ ರೋಲ್ನಲ್ಲಿ ಕಾಣಿಸಿಕೊಳ್ತಿದ್ದಾರೆ. ಆದ್ರೆ, ಗುರುಶಿಷ್ಯರ ಕಥೆಯೇನು? ಈ ಚಿತ್ರಕ್ಕೆ ನಾಯಕಿ ಯಾರು? ನಾಯಕಿ ಆಯ್ಕೆ ಮಾಡಿದ್ದು ಹೇಗೆ ಅನ್ನೋ ಸೀಕ್ರೆಟ್ ಅನ್ನು ಮಾತ್ರ ರಿವೀಲ್ ಮಾಡಿರಲಿಲ್ಲ. ಕೊನೆಗೂ ಗುರುಶಿಷ್ಯರ ತಂಡ ಆ ಗುಟ್ಟನ್ನೀಗ ಬಿಟ್ಟುಕೊಟ್ಟಿದೆ.
ಗುರುಶಿಷ್ಯರು ಆರಂಭ ಆದಲ್ಲಿಂದ ಶರಣ್ಗೆ ನಾಯಕಿ ಯಾರಾಗ್ಬಹುದು? ಅನ್ನೋದನ್ನು ಚಿತ್ರತಂಡ ರಿವೀಲ್ ಮಾಡಿರಲಿಲ್ಲ. ಆದ್ರೀಗ, ನಾಯಕಿ ಯಾರು? ಯಾರನ್ನು ಸಿನಿಮಾ ಈ ಪಾತ್ರಕ್ಕೆ ಗಣನೆ ಮಾಡಿದ್ರು? ಅನ್ನೋದನ್ನು ಹಾಸ್ಯಾಸ್ಪದವಾಗಿ ಶರಣ್, ತರುಣ್ ಸುಧೀರ್ ಹಾಗೂ ನಿರ್ದೇಶಕರು ಸೇರಿ ಒಂದು ವಿಡಿಯೋ ಮಾಡಿದ್ದಾರೆ. ಆ ವಿಡಿಯೋ ಕಿಕ್ ಮೇಲೆ ಕಿಕ್ ಕೊಡ್ತಿದೆ.
ಗುರುಶಿಷ್ಯರು ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿರೋದು ಅಮ್ಮ ಐ ಲವ್ ಯು, ಪಡ್ಡೆ ಹುಲಿ, ಜಂಟಲ್ಮ್ಯಾನ್ ಖ್ಯಾತಿಯ ನಿಶ್ವಿಕಾ ನಾಯ್ಡು. ಗುರುಶಿಷ್ಯರು ಜೊತೆ ಗಾಳಿಪಟ2, ಸಖತ್ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ.
ಗುರುಶಿಷ್ಯರಿಗಾಗಿ ಸುಮಾರು 30 ಹೊಸ ಕಲಾವಿದೆಯರನ್ನು ಪರಿಗಣಿಸಲಾಗಿತ್ತು. ಕನ್ನಡ ಚಿತ್ರರಂಗದ ನಟಿಯರು ಸೇರಿದಂತೆ ಪರಭಾಷಾ ನಟಿಯರನ್ನೂ ಕೂಡ ಪರಿಗಣಿಸಲಾಗಿತ್ತು. ಆದ್ರೆ, ಕೊನೆಯದಾಗಿ ಈ ಪಾತ್ರಕ್ಕೆ ನಿಶ್ವಿಕಾ ನಾಯ್ಡು ಅವ್ರನ್ನೇ ಆಯ್ಕೆ ಮಾಡಲಾಗಿದೆ.
ಗುರುಶಿಷ್ಯರು ಸಿನಿಮಾದಲ್ಲಿ ಶರಣ್ ದೈಹಿಕ ಶಿಕ್ಷಕನಾಗಿ ಕಾಣಿಸಿಕೊಂಡಿದ್ದಾರೆ. ಇವ್ರೊಂದಿಗೆ ನಿಶ್ವಿಕಾ ನಾಯ್ಡು ಅಪ್ಪಟ ಹಳ್ಳಿ ಹುಡುಗಿಯಾಗಿ, ರವಿಚಂದ್ರನ್ ಅಭಿಮಾನಿಯಾಗಿ, ಹಾಲಿನ ಡೈರಿ ನಡೆಸುವ ಸ್ವಯಂಕೃಷಿ ಮಾಡುವ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಗುರುಶಿಷ್ಯರು ಚಿತ್ರದ ಕಥೆ 1995 ರಲ್ಲಿ ನಡೆಯಲಿದೆ. ಹೀಗಾಗಿ ನಾಯಕಿ ಪಾತ್ರ ಕೂಡ ಹಳ್ಳಿ ಸೊಗಡಿನದ್ದೇ ಆಗಿದೆ. ಈಗಾಗ್ಲೇ ಗುರುಶಿಷ್ಯರು ಸಿನಿಮಾದ ಶೇ.60ರಷ್ಟು ಚಿತ್ರೀಕರಣ ಮುಗಿಸಿದೆ. ಉಳಿದ ಭಾಗದ ಚಿತ್ರೀಕರಣ ಲಾಕ್ಡೌನ್ ಬಳಿಕ ಶುರುವಾಗಲಿದೆ.