ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಹಾಗೂ ಪತ್ನಿ ರೇವತಿಗೆ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಕಳೆದ ವರ್ಷ ಏಪ್ರಿಲ್ 17ರಂದು ನಿಖಿಲ್ ಹಾಗೂ ರೇವತಿ ವಿವಾಹ ಜರುಗಿತ್ತು. ಕೊರೊನಾ ಹಾಗೂ ಲಾಕ್ಡೌನ್ ಮಧ್ಯೆನೇ ಆತ್ಮೀಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು.
ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿರೋ ನಿಖಿಲ್ ತನ್ನ ಪತ್ನಿಗೆ ಪ್ರೀತಿಯಿಂದ ಪತ್ರ ಬರೆದಿದ್ದಾರೆ. ‘‘ಒಂದು ವರ್ಷದ ಹಿಂದೆ ನೀವು ನನ್ನ ಬದುಕಿಗೆ ಬಂದ್ರಿ. ಇದೂವರೆಗೂ ನಾವು ಹಲವು ಮರೆಯಲಾಗದ ಮಧುರಕ್ಷಣಗಳನ್ನು ಒಟ್ಟಿಗೆ ಕಳೆದಿದ್ದೇವೆ. ನಾವಿಬ್ಬರೂ ಒಬ್ಬರನ್ನೊಬ್ಬರು ಕಂಡುಕೊಂಡಿದ್ದು ಅದೃಷ್ಟವೆಂದು ಭಾವಿಸುತ್ತೇನೆ. ಜೀವನವು ನೇರವಾದ ಹಾದಿಯಲ್ಲ ಅನ್ನೋದನ್ನ ಅರಿತಿದ್ದೇನೆ. ಅಲ್ಲಿ ಏರಿಳಿತ ಇದ್ದೇ ಇರುತ್ತದೆ. ನಾನು ಹೀಗೆ ನಿಶ್ಚಿಂತೆಯಾಗಿ ಪ್ರಯಾಣಿಸುತ್ತಿರೋದಕ್ಕೆ ನೀವೆ ಕಾರಣ. ಮಹಿಳೆಯಾಗಿ ಹುಟ್ಟುವುದು ಸುಲಭವಲ್ಲ. ನಮ್ಮ ಗುರಿಯನ್ನು ತಲುಪಲು, ಕುಟುಂಬವನ್ನು ಸರಿಯಾದ ರೀತಿಯಲ್ಲಿ ಕೊಂಡೊಯ್ಯುವುದನ್ನು ಮೆಚ್ಚಲೇಬೇಕು. ಈ ಸಂದರ್ಭದಲ್ಲಿ ಎಲ್ಲಾ ಮಹಿಳೆಯರಿಗೂ ನಾನು ಅಭಿನಂದಿತ್ತೇನೆ. ನಮ್ಮಿಬ್ಬರನ್ನೂ ಇಷ್ಟಪಟ್ಟು ಹಾರೈಸಿದ ಪ್ರತಿಯೊಬ್ಬರಿಗೂ, ದಂಪತಿಗಳಿಗೂ ಧನ್ಯವಾದಗಳು’’ ಎಂದು ಪತ್ನಿಗೆ ಪತ್ರ ಬರೆದಿದ್ದಾರೆ.
ನಿಖಿಲ್ ಮದುವೆಯಾದಲ್ಲಿಂದ ತನ್ನ ಪತ್ನಿಯೊಂದಿಗೆ ಸುಂದರಕ್ಷಣಗಳನ್ನ ಕಳೆಯುತ್ತಿದ್ದಾರೆ. ಆಗ ಇಬ್ಬರೂ ದೇವಸ್ಥಾನಕ್ಕೆ ಹೋಗಿದ್ದ ಫೋಟೊಗಳು, ತೋಟಕ್ಕೆ ಭೇಟಿಕೊಟ್ಟ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಬರ್ತಡೇ ಯಿಂದ ಪ್ರತಿಯೊಂದು ಮಧುರಕ್ಷಣಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಸದ್ಯಕ್ಕೀಗ ರೈಡರ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಲಡಾಖ್ನಲ್ಲಿ ರೈಡರ್ ಚಿತ್ರದ ಒಂದು ಹಂತದ ಚಿತ್ರೀಕರಣ ನಡೆದಿದೆ. ಮೊದಲ ವಿವಾಹ ವಾರ್ಷಿಕೋತ್ಸವಕ್ಕೆಂದೆ ಹಿಂತಿರುಗಿರೋ ನಿಖಿಲ್, ಪತ್ನಿ ರೇವತಿಯೊಂದಿಗೆ ಮೊದಲ ವಿವಾಹವಾರ್ಷಿಕೋತ್ಸವ ಆಚರಿಸಿ ಸಂಭ್ರಮಿಸಿದ್ದಾರೆ.