ಕೊರೊನಾದಿಂದ ದಿಕ್ಕೆಟ್ಟವರಿಗೆ ಸಹಾಯ ಮಾಡೋಕೆ ದಿನಸಿ ಕಿಟ್ ಹಂಚಲು ಗೆಳೆಯನ ಜೊತೆ ನಿನ್ನೆ ರಾತ್ರಿ ಹೋಗುತ್ತಿದ್ದರು ಸಂಚಾರಿ ವಿಜಯ್. ತಲೆಗೆ ಬಹುಶಃ ಹೆಲ್ಮೆಟ್ ಹಾಕುವುದನ್ನು ಮರೆತಿದ್ದರು ಎನಿಸುತ್ತದೆ. ದುರದೃಷ್ಟವಶಾತ್ ಆ ಬೈಕ್ ಅಪಘಾತಕ್ಕೀಡಾಗಿದೆ. ಒಂದು ದಿನದ ನಂತರವೂ ವಿಜಯ್ ಪರಿಸ್ಥಿತಿ ಸುಧಾರಿಸಿಲ್ಲ, ಇನ್ನೂ 48 ಗಂಟೆ ಏನೂ ಹೇಳಕ್ಕಾಗಲ್ಲ ಎನ್ನುತ್ತಿದ್ದಾರೆ ವೈದ್ಯರು.
ಸದ್ಯ ನಟ ಸಂಚಾರಿ ವಿಜಯ್ ಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ. ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ವಿಜಯ್ ಚಿಕಿತ್ಸೆ ನಡೆಯುತ್ತಿದೆ. ಆಸ್ಪತ್ರೆ ವೈದ್ಯರು 48 ಗಂಟೆಗಳ ಕಾಲ ಏನೂ ಹೇಳಲು ಆಗಲ್ಲ ಎಂದಿದ್ದಾರೆ. ಮೆದುಳಿಗೆ ಪೆಟ್ಟು ಬಿದ್ದಿದ್ದು ತಲೆ ಊತ ಬಂದಿದೆ, ತಲೆಯ ಊತ ಕಮ್ಮಿ ಆದ್ರೆ ಮಾತ್ರ ಏನಾದ್ರೂ ಹೇಳಬಹದು ಎಂದಿದ್ದಾರೆ ವೈದ್ಯರು. ಊತ ಕಮ್ಮಿ ಆಗಲು 48 ಗಂಟೆಗಳು ಬೇಕಾಗಬಹುದು ಎನ್ನಲಾಗಿದೆ.
ಈ ಕುರಿತು ಅಪೋಲೋ ಆಸ್ಪತ್ರೆಯಿಂದ ನಟ ಸಂಚಾರಿ ವಿಜಯ್ ಆರೋಗ್ಯ ಸ್ಥಿತಿ ಕುರಿತ ಹೆಲ್ತ್ ಬುಲೆಟಿನ್ ಬಿಡುಗಡೆ ಆಗಿದೆ. ನಿನ್ನೆ ರಾತ್ರಿ ಸಂಚಾರಿ ವಿಜಯ್ ರನ್ನು ಆಸ್ಪತ್ರೆಗೆ ದಾಖಲಿಸಿದ ತಕ್ಷಣ ಸಿಟಿ ಸ್ಕ್ಯಾನ್ ಮಾಡಲಾಯಿತು. ಅವರ ತಲೆಗೆ ಗಂಭೀರ ಪೆಟ್ಟು ಬಿದ್ದು, ತೀವ್ರ ರಕ್ತಸ್ರಾವ ಆಗಿರುವುದು ತಿಳಿದು ಬಂತು.ತಕ್ಷಣ ಬ್ರೇನ್ ಸರ್ಜರಿ ಮಾಡಲಾಗಿದೆ, ಸದ್ಯ ಅವರು ಐಸಿಯುನಲ್ಲಿ ಸಂಪೂರ್ಣ ಲೈಫ್ ಸಪೋರ್ಟ್ ನಲ್ಲಿದ್ದಾರೆ. ಅವರು ಕೋಮಾದಲ್ಲಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಆದಷ್ಟು ಬೇಗ ವಿಜಯ್ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ದೇವರಲ್ಲಿ ಬೇಡಿಕೊಂಡಿದ್ದಾರೆ.