ಬಹುಶಃ ಮಲಯಾಳಂ ಚಿತ್ರ ದೃಶ್ಯಂ 2 ಒಟಿಟಿಯಲ್ಲಿ ಬಿಡುಗಡೆಯಾಗಿ ಅತೀ ಹೆಚ್ಚು ಯಶಸ್ಸು ಗಳಿಸಿದ ಚಿತ್ರ. ಬಿಡುಗಡೆಗೂ ಮುನ್ನವೇ ಜನ ಕಾತರತೆಯಿಂದ ಕಾಯ್ತಾ ಇದ್ದ ಸಿನಿಮಾ ಇದು. ಮೊದಲ ಚಿತ್ರ ಬಿಡುಗಡೆಯಾಗಿ ಏಳು ವರ್ಷಗಳ ನಂತರ ಬಂದ ಸೀಕ್ವೆಲ್ ಆದ್ರೂ ಚಿತ್ರಕತೆ, ಅಭಿನಯ, ಕತೆ ಎಲ್ಲಾ ಸೇರಿ ಈ ಚಿತ್ರವನ್ನು ಯಶಸ್ಸಿನ ಉತ್ತುಂಗಕ್ಕೆ ಏರಿಸಿವೆ.
ಇಷ್ಟೆಲ್ಲಾ ಸದ್ದು ಮಾಡ್ತಿರೊ ಈ ಚಿತ್ರದ ಬಜೆಟ್ ಕೇವಲ 20 ಕೋಟಿ ರೂಪಾಯಿಗಳು. ಆದ್ರೆ ಅಮೆಜಾನ್ ಪ್ರೈಮ್ ಈ ಚಿತ್ರಕ್ಕೆ 25 ಕೋಟಿ ರೂಪಾಯಿ ಕೊಟ್ಟು ಖರೀದಿಸಿದೆ. ಇನ್ನು ಸ್ಯಾಟಲೈಟ್ ರೈಟ್ಸ್ 15 ಕೋಟಿಗೆ ಸೇಲ್ ಆಗಿದೆ. ರೀಮೇಕ್ ರೈಟ್ಸ್ ಇನ್ನೂ ವ್ಯಾಪಾರ ನಡೀತಾ ಇದೆ. ತೆಲುಗಿಗೆ ಈಗಾಗಲೇ ಭಾರೀ ಮೊತ್ತಕ್ಕೆ ಸೇಲ್ ಆಗಿದೆ ಎನ್ನಲಾಗ್ತಿದೆ.
ಮೊದಲ ಚಿತ್ರ ಕನ್ನಡ, ತಮಿಳು, ತೆಲುಗು, ಹಿಂದಿ, ಚೈನೀಸ್, ಕೊರಿಯನ್ ಭಾಷೆಗಳಿಗೆಲ್ಲಾ ರೀಮೇಕ್ ಆಗಿತ್ತು. ಆ ಲೆಕ್ಕದಲ್ಲಿ ನೋಡಿದ್ರೆ ಈ ಚಿತ್ರ ಇನ್ನೂ ಕೋಟ್ಯಂತರ ರೂಪಾಯಿ ಬಾಚಿಕೊಳ್ಳೋದು ಬಾಕಿ ಇದೆ. ನಿರ್ದೇಶಕ ಜೀತು ಜೋಸೆಫ್ ಲಾಕ್ ಡೌನ್ ಸಂದರ್ಭದಲ್ಲಿ ದೃಶ್ಯಂ 2 ಕತೆ ರಚಿಸಿದ್ರಂತೆ. ನಿರ್ಮಾಪಕ ಆಂಟನಿ ಪೆರಂಬವೂರ್ ನಟ ಮೋಹನ್ ಲಾಲ್ ಕಾರಿನ ಡ್ರೈವರ್ ಆಗಿದ್ದವರು. ಭರ್ಜರಿ ಸಿನಿಮಾ ತಯಾರಿಸಿ ಅವರೂ ದೊಡ್ಡ ಯಶಸ್ಸು ಕಾಣುತ್ತಿದ್ದಾರೆ.