ಜೂನ್ 12ರಂದು ತಮಿಳುನಾಡಿನ ಮುಖ್ಯಮಂತ್ರಿ ಎಂಕೆ ಸ್ಟ್ಯಾಲಿನ್ ಸರ್ವಪಕ್ಷಗಳ ಸಭೆ ಕರೆದಿದ್ದರು. ಇಲ್ಲಿ 13 ಪಕ್ಷಗಳು ಮೇಕೆದಾಟು ಆಣೆಕಟ್ಟನ್ನು ನಿರ್ಮಿಸಲು ಬಿಡಬಾರದೆಂಬ ನಿರ್ಧಾರ ಕೈಗೊಳ್ಳಲಾಗಿದೆ. ಇದೇ ವಿಚಾರವಾಗಿ ಕೇಂದ್ರ ಸರ್ಕಾರಕ್ಕೂ ಸ್ಟ್ಯಾಲಿನ್ ಪತ್ರ ಬರೆದಿದ್ದಾರೆ. ಹಾಗೇ ಸಿಎಂ ಯಡಿಯೂರಪ್ಪ ಮೇಕದಾಟು ಪ್ರಾಜೆಕ್ಟ್ ನಿಲ್ಲಿಸುವಂತೆ ಪತ್ರ ಬರೆಯಲಾಗಿದೆ. ಇಷ್ಟೆಲ್ಲಾ ಬೆಳವಣಿಗಳ ಮಧ್ಯೆ ಕುಡಿಯುವ ನೀರಿಗಾಗಿ ರೂಪುಗೊಂಡಿರುವ ಮೇಕೆದಾಟು ಯೋಜನೆಯನ್ನ ನಿಲ್ಲಿಸುವುದಿಲ್ಲ. ಇದು ನಮ್ಮ ರಾಜ್ಯದ ಹಕ್ಕು ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಮೇಕೆದಾಟಿನ ಸಮಗ್ರ ಯೋಜನಾ ವರದಿಯನ್ನು ಈಗಾಗ್ಲೇ ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿದೆ. ಹೆಚ್ಚುವರಿ ಕಾವೇರಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಬಳಕೆ ಮಾಡುವ ಯೋಜನೆಯಾಗಿದೆ. ಈ ಯೋಜನೆಯನ್ನು ಜಾರಿಗೊಳಿಸುವ ಎಲ್ಲಾ ಹಕ್ಕುಗಳು ಕರ್ನಾಟಕಕ್ಕೆ ಇದೆ. ರಾಜ್ಯದ ಜನರ ಹಿತರಕ್ಷಣೆಯಿಂದ ಈ ಯೋಜನೆಯನ್ನು ಶೇ. 100ರಷ್ಟು ಜಾರಿಗೊಳಿಸಲಾಗುತ್ತದೆ. ರಾಜ್ಯ ಸರ್ಕಾರದ ಈ ಮನವಿಯನ್ನು ನಿಯಮಗಳ ಪ್ರಕಾರ ಕೇಂದ್ರ ಸರ್ಕಾರ ಪರಿಗಣಿಸಬೇಕೆಂದು ತಿಳಿಸಿದ್ದಾರೆ.
ಮೇಕೆದಾಟು ಕುಡಿಯುವ ನೀರಿನ ಯೋಜನೆಯಾಗಿದೆ. ಹೀಗಾಗಿ ಈ ಯೋಜನೆಯನ್ನು ನಾವು ಖಂಡಿತವಾಗಿಯೂ ಜಾರಿ ಮಾಡುತ್ತೇವೆ. ಕೇಂದ್ರದಿಂದ ಅಗತ್ಯ ಒಪ್ಪಿಗೆಗಳನ್ನು ಶಕ್ತಿಮೀರಿ ಪಡೆಯಲು ಪ್ರಯತ್ನಿಸುತ್ತೇವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಈಗಾಗ್ಲೇ ತೀರ್ಪು ಬಂದಿದೆ. ಅದರ ಪ್ರಕಾರವೇ ತಮಿಳುನಾಡಿಗೆ ಯಾವ್ಯಾವ ಸಮಯಕ್ಕೆ ಎಷ್ಟೆಷ್ಟು ನೀರು ಬಿಡಬೇಕು ಎಂಬುದನ್ನು ಕಾವೇರಿ ಮಂಡಳಿ ಗಮನಿಸುತ್ತದೆ. ಸಂಕಷ್ಟ ಸಂದರ್ಭದಲ್ಲಿ ಹೆಚ್ಚುವರಿ ನೀರನ್ನು ಹಂಚಿಕೆ ಮಾಡಿಕೊಳ್ಳುವುದರಿಂದ ಎರಡು ರಾಜ್ಯಗಳಿಗೆ ಅನುಕೂಲ ಎಂಬುದನ್ನು ತಮಿಳುನಾಡು ಸರ್ಕಾರ ಅರಿತುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.