ನಟಿ ಮೇಘನಾ ರಾಜ್ ಇತ್ತೀಚೆಗೆ ಮತ್ತೊಮ್ಮೆ ಕೊರೊನಾ ಆತಂಕಕ್ಕೆ ಸಿಲುಕಿದ್ದರಂತೆ. ತಮ್ಮ ಸ್ನೇಹಿತರೊಬ್ಬರ ಸಂಪರ್ಕಕ್ಕೆ ಬಂದಿದ್ದ ಕೆಲ ದಿನಗಳಲ್ಲಿ ಆ ಸ್ನೇಹಿತರು ಕೊರೊನಾ ಪಾಸಿಟಿವ್ ಎಂದು ತಿಳಿದುಬಂದಿದೆ. ಆಗ ಮೇಘನಾಗೆ ವಿಪರೀತ ಆತಂಕವಾಗಿದೆ. ತಮಗಿಂತ ಹೆಚ್ಚಾಗಿ ತಮ್ಮ ಮಗು ಜ್ಯೂನಿಯರ್ ಚಿರು ಬಗ್ಗೆ ಮೇಘನಾ ಗಾಬರಿಯಾಗಿದ್ದಾರೆ.
ಮುನ್ನೆಚ್ಚರಿಕೆಯಾಗಿ ತಾವು ಸೆಲ್ಫ್ ಕ್ವಾರಂಟೈನ್ ಆಗಿದ್ದಾರೆ. ಜೊತೆಗೆ ಕೋವಿಡ್ ಪರೀಕ್ಷೆಯನ್ನೂ ಮಾಡಿಸಿಕೊಂಡಿದ್ದಾರೆ. ಕೋವಿಡ್ ಟೆಸ್ಟ್ ರಿಸಲ್ಟ್ ನೆಗೆಟಿವ್ ಎಂದು ಬಂದಿದ್ದರೂ ಒಂದಷ್ಟು ದಿನ ಸೆಲ್ಫ್ ಐಸೊಲೇಶನ್ನಲ್ಲೇ ಮುಂದುವರೆದಿದ್ರಂತೆ ಮೇಘನಾ.


ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಮೇಘನಾ ರಾಜ್, ಅವರ ತಂದೆ ತಾಯಿಯರಾದ ಸುಂದರ ರಾಜ್ ಮತ್ತು ಪ್ರಮೀಳಾ ಜೋಷಾಯ್ ಮೂವರಿಗೂ ಕೋವಿಡ್ ಸೋಂಕು ತಗುಲಿತ್ತು. ಮೂವರೂ ಸೂಕ್ತ ಆರೈಕೆ ಮತ್ತು ಎಚ್ಚರಿಕೆಯಿಂದ ಗುಣಮುಖರಾಗಿದ್ದರು. ಆದ್ರೆ ತಮಗಿಂತ ಹೆಚ್ಚು ಪುಟಾಣಿ ಮಗುವಿನ ಬಗ್ಗೆ ಎಲ್ಲರಲ್ಲೂ ಆತಂಕ ಹೆಚ್ಚಿತ್ತು. ಆಗಿನ್ನೂ ಜ್ಯೂನಿಯರ್ ಚಿರುಗೆ ಕೇವಲ 2 ತಿಂಗಳಷ್ಟೇ ಆಗಿತ್ತು.


ಎಲ್ಲರೂ ಬಹಳ ಜಾಗರೂಕರಾಗಿರಿ, ಎಷ್ಟೇ ಜೋಪಾನವಿದ್ದರೂ ಸಾಲದು ಎನ್ನುವಂಥಾ ಪರಿಸ್ಥಿತಿ ಇದೆ. ಕೇವಲ ನಮ್ಮ ಬಗ್ಗೆ ಮಾತ್ರವಲ್ಲದೆ ನಮ್ಮ ಸುತ್ತಮುತ್ತಲಿನವರ ಬಗ್ಗೆಯೂ ನಾವು ಆಲೋಚಿಸಬೇಕು. ಇಮ್ಯುನಿಟಿ ಕಡಿಮೆ ಇರುವ ಯಾರಿಗಾದರೂ ನಮ್ಮಿಂದಾಗಿ ಸೋಂಕು ಹರಡಿದ್ರೆ ಅವರ ಜೀವಕ್ಕೆ ನಾವೇ ಅಪಾಯ ತಂದಂತಾಗುತ್ತದೆ. ಹಾಗಾಗಿ ಎಲ್ಲರೂ ಜೋಪಾನವಾಗಿರಿ ಎಂದು ಮೇಘನಾ ರಾಜ್ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದಾರೆ.