ಕನ್ನಡ ಹುಡುಗ ಹುಡುಗಿಯರೇ ಪರಭಾಷಾ ಸಿನಿಮಾ ಹಾಡುಗಳಿಗೆ ಟಿಕ್ ಟಾಕ್, ಇನ್ ಸ್ಟಾ ರೀಲ್ ಗಳನ್ನ ಮಾಡ್ತಿರೋವಾಗ ಕೊರಿಯನ್ ಯುವತಿ ಒಬ್ಬಳು ‘ಯುವರತ್ನ’ ಚಿತ್ರದ ಹಾಡು ಹಾಡಿ ಕನ್ನಡಿಗರ ಮನ ಗೆದ್ದಿದ್ದಾಳೆ. ಶ್ರೇಯಾ ಘೋಷಾಲ್ ಹಾಡಿರುವ ‘ನೀನಾದೆನಾ’ ಹಾಡನ್ನ ಈ ಯುವತಿ ಹಾಡಿದ್ದು, ಆ ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ಲಾಗಿದೆ. ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಈ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಏಪ್ರಿಲ್ ಮೊದಲ ವಾರ ತೆರೆಕಂಡ ‘ಯುವರತ್ನ’ ಸಿನಿಮಾ ಕೊರೋನಾ ಲಾಕ್ಡೌನ್ ಕಾರಣ ಬಾಕ್ಸಾಫೀಸ್ ನಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ. ಆದರೆ ಪ್ರೇಕ್ಷಕರ ಮನಗೆಲ್ಲುವಲ್ಲಿ ಸಕ್ಸಸ್ ಕಂಡಿತ್ತು. ಎಸ್. ತಮನ್ ಸಂಗೀತದ ‘ಯುವರತ್ನ’ ಆಲ್ಬಮ್ ಒಂದು ರೇಂಜಿಗೆ ಹಿಟ್ ಆಗಿತ್ತು. ಬೇರೆಲ್ಲಾ ಹಾಡುಗಳಿಗಿಂತ ಈ ಮೆಲೋಡಿ ಹಾಡು ಸಿನಿರಸಿಕರಿಗೆ ಇಷ್ಟವಾಗಿತ್ತು. ಇದೀಗ ಕೊರಿಯನ್ ಯುವತಿಯ ‘ನೀನಾದೆನಾ’ ಕವರ್ ವರ್ಷನ್ ಕೂಡ ಸದ್ದು ಮಾಡ್ತಿದೆ.
ಈಕೆ ಕನ್ನಡ ಹಾಡನ್ನು ಹಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಮುಂಗಾರು ಮಳೆ’-2 ಚಿತ್ರದ ‘ಸರಿಯಾಗಿ ನೆನಪಿದೆ ನನಗೆ’ ಹಾಡನ್ನು ಹಾಡಿದ್ದಳು. ಆದರೆ ಆ ವೀಡಿಯೋ ಅಷ್ಟಾಗಿ ವೈರಲ್ ಆಗಿರಲಿಲ್ಲ. ‘ಯುವರತ್ನ’ ಚಿತ್ರದ ಹಾಡಿನ ವೀಡಿಯೋ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚಕ್ಕರ್ ಹೊಡೀತಿದೆ.