ಕೋರ್ಟ್ ಮೆಟ್ಟಿಲೇರಿದ್ದ ಕಿರಿಕ್ ಪಾರ್ಟಿ ಸಿನಿಮಾ ಕಾಪಿರೈಟ್ ಪ್ರಕರಣ ಮಾತುಕತೆ ಮೂಲಕವೇ ಬಗೆಹರಿದಿರೋದು ಅಚ್ಚರಿ ಮೂಡಿಸಿದೆ. ಸ್ವತಃ ರಕ್ಷಿತ್ ಶೆಟ್ಟಿ ಈ ಬಗ್ಗೆ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಲಹರಿ ವೇಲು ಜೊತೆಗಿರುವ ಸೆಲ್ಫಿ ಫೋಟೋ ಕೂಡ ಶೇರ್ ಮಾಡಿದ್ದಾರೆ. 2016ರಲ್ಲಿ ಕಿರಿಕ್ ಪಾರ್ಟಿ ಸಿನಿಮಾ ಬಿಡುಗಡೆಗೆ ಎರಡು ದಿನ ಇದ್ದಾಗ ಬಿಡುಗಡೆಗೆ ತಡೆಕೋರಿ ವೇಲು ಕೋರ್ಟ್ ಮೆಟ್ಟಿಲೇರಿದ್ದರು. ಮೊದಲ 3 ದಿನ ಹಾಡನ್ನು ಕಟ್ ಮಾಡಿ ಸಿನಿಮಾ ಪ್ರದರ್ಶನ ಮಾಡಿದ್ದ ಚಿತ್ರತಂಡ ಕೋರ್ಟ್ ಆದೇಶ ಬಂದ ಮೇಲೆ ಹಾಡನ್ನ ಸೇರಿಸಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿ 2019ರಲ್ಲಿ ಕಿರಿಕ್ಪಾರ್ಟಿ ಚಿತ್ರತಂಡಕ್ಕೆ ಗೊತ್ತಿಲ್ಲದಂತೆ ಲಹರಿ ವೇಲು ಮತ್ತೊಂದು ಕೇಸ್ ದಾಖಲಿಸಿದ್ದರು. ಇಷ್ಟೆಲ್ಲಾ ಆದಮೇಲೂ ಮಾತುಕತೆ ಮೂಲಕವೇ ಕಿರಿಕ್ ಬಗೆಹರಿದಿರೋದು ವಿಚಿತ್ರ ಅನ್ನಿಸುತ್ತಿದೆ.
ಹಂಸಲೇಖ ಮತ್ತು ರವಿಚಂದ್ರನ್ ಅವರಿಗೆ ಟ್ರಿಬ್ಯೂಟ್ ಮಾಡಲು ಶಾಂತಿ ಕ್ರಾಂತಿ ಚಿತ್ರದ ರಿದಮ್ ಬಳಸಿ ‘ಹೇ ಹೂ ಆರ್ ಯೂ’ ಹಾಡನ್ನ ಕಂಪೋಸ್ ಮಾಡಿರೋದಾಗಿ ರಕ್ಷಿತ್ ಶೆಟ್ಟಿ ಹೇಳ್ತಾ ಬಂದಿದ್ದರು. ನಾವು ಟ್ಯೂನ್, ಸಾಹಿತ್ಯ ತೆಗೆದುಕೊಂಡಿಲ್ಲ, ಬರೀ ರಿದಮ್ ಅಷ್ಟೇ ಬಳಸಿರೋದು ಅಂತ ವಾದ ಮಾಡುತ್ತಲೇ ಬಂದಿದ್ದರು. ಕಾಪಿರೈಟ್ಸ್ ಆಕ್ಟ್ 63a, 63b ಅನ್ವಯ ದಾಖಲಾಗಿದ್ದ ಪ್ರಕರಣದ ಸಂಬಂಧ 9ನೇ ಎಸಿಎಂಎಂ ನ್ಯಾಯಾಲಯ ವಿಚಾರಣೆ ನಡೆಸುತ್ತಾ ಬಂದಿತ್ತು. ಹಲವು ಬಾರಿ ವಿಚಾರಣೆ ಗೈರಾದ ಹಿನ್ನಲೆ ರಕ್ಷಿತ್ ಶೆಟ್ಟಿ ವಿರುದ್ಧ ಜಾಮೀನು ರಹಿತ ವಾರೆಂಟ್ ಸಹ ಜಾರಿಯಾಗಿತ್ತು. ಕೊನೆಗೆ ಅವರು ಕೋರ್ಟ್ಗೆ ಬಂದು ತಮ್ಮ ವಾದವನ್ನ ಪುನರುಚ್ಚರಿಸಿದ್ದರು.
ಈ ಕಾಪಿರೈಟ್ ಕಿರಿಕ್ಗೆ ಸಂಬಂಧಿಸಿ ಸಾರ್ವಜನಿಕವಾಗಿ ರಕ್ಷಿತ್ ಶೆಟ್ಟಿ ಮತ್ತು ಲಹರಿ ವೇಲು ಸಾಕಷ್ಟು ಆರೋಪ ಪ್ರತ್ಯಾರೋಪಗಳನ್ನ ಮಾಡಿದ್ದರು. ಆದರೆ ಈಗ ಏಕಾಏಕಿ ಮಾತುಕತೆ ಮೂಲಕವೇ ಸಮಸ್ಯೆ ಬಗೆಹರಿದಿದೆ ಅನ್ನೋದು ಕೆಲವರಲ್ಲಿ ಅನುಮಾನ ಮೂಡಿಸುತ್ತಿದೆ. ಲಹರಿ ವೇಲು ಹೇಳಿಕೇಳಿ ಲೆಕ್ಕಾಚಾರದ ಆಸಾಮಿ. ಅಷ್ಟು ಸುಲಭವಾಗಿ ಬಗೆಹರಿಯುವಂತಿದ್ದರೆ ಲಹರಿ ವೇಲು 2 ಬಾರಿ ಕೋರ್ಟ್ ಮೆಟ್ಟಿಲು ಏರುತ್ತಿರಲಿಲ್ಲ. ಮಾತುಕತೆ ಮೂಲಕ ಅವರು ಈ ಕಿರಿಕ್ ಅನ್ನು ಬಗೆಹರಿಸಿಕೊಂಡಿರೋಕೆ ಸಾಧ್ಯವೇ ಇಲ್ಲ ಅಂತ ಗಾಂಧೀನಗರ ಮಾತನಾಡ್ತಿದೆ. ಅದೆಲ್ಲಾ ಏನೇ ಇದ್ರು, ಕಿರಿಕ್ ಪಾರ್ಟಿ ಸಿನಿಮಾ ವಿವಾದ ಬಗೆಹರಿದಿರೋದು ಕನ್ನಡ ಸಿನಿರಸಿಕರಿಗೆ ಸಂತಸ ತಂದಿದೆ.