ಕೊರೊನಾ ಸಮಯದಲ್ಲಿ ಸಂಬಂಧಿಕರೇ ದೂರುವಾಗುತ್ತಿರುವ ಕಾಲವಿದೆ. ಕೊರೊನಾ ಸೋಂಕು ತಗುಲಿದೆ ಅಂತ ಗೊತ್ತಾದ ಕ್ಷಣದಿಂದ ಮಕ್ಕಳು ತಂದೆ-ತಾಯಿಯಿಂದ ದೂರವಾಗಿರೋ ಉದಾಹರಣೆಗಳು ಸಾಕಷ್ಟಿವೆ. ಇಂತಹ ವೇಳೆ ಕನ್ನಡ ಚಿತ್ರರಂಗದ ಹಿರಿಯರ ಯೋಗಕ್ಷೇಮವನ್ನು ಕಿಚ್ಚ ಸುದೀಪ್ ವಿಚಾರಿಸಿದ್ದಾರೆ. ಮೊದಲು ಮಾನವನಾಗು ಟ್ರಸ್ಟ್ ಕಡೆಯಿಂದ ಕಿಚ್ಚನ ಹುಡುಗರು ಹಿರಿಯರ ಮನೆಗೆ ಹೋಗಿ ಯೋಗಕ್ಷೇಮ ವಿಚಾರಿಸಿ, ಸಿಹಿ ಹಾಗೂ ಡ್ರೈ ಫ್ರೂಟ್ಸ್ ಅನ್ನು ಕೊಟ್ಟು ಬಂದಿದ್ದಾರೆ.
ಈಗಾಗ್ಲೇ ಸುಮಾರು 100ಕ್ಕೂ ಅಧಿಕ ಕಲಾವಿದರನ್ನು ಕಿಚ್ಚನ ಹುಡುಗರು ಭೇಟಿ ಮಾಡಿದ್ದಾರೆ. ಮೇ 19 ಒಂದೇ ದಿನ ಸುಮಾರು 40ಕ್ಕೂ ಹೆಚ್ಚು ಹಿರಿಯ ಕಲಾವಿದರನ್ನು ಕಿಚ್ಚನ ಟೀಮ್ ಭೇಟಿ ಮಾಡಿ, ಅವರ ಯೋಗಕ್ಷೇಮ ವಿಚಾರಿಸಿದ್ದಾರೆ.
ಹಿರಿಯ ನಟರಾದ ರಾಜೇಶ್, ಶ್ರೀನಿವಾಸ ಮೂರ್ತಿ, ಉಮೇಶ್, ಅರವಿಂದ್, ಎಂ.ಎನ್ ಸುರೇಶ್, ಆರ್ ಟಿ ರಾಮ, ಆಶಾಲತಾ, ಪುಷ್ಪಸ್ವಾಮಿ, ಶೈಲಾ ಸುದರ್ಶನ್, ಸುಲೋಚನಾ, ಮಾಲತಿ ಮೈಸೂರು, ಸಿತಾರಾ, ಬೆಂಗಳೂರು ನಾಗೇಶ್, ಹೊನ್ನವಳ್ಳಿ ಕೃಷ್ಣ, ಅರಸೀಕೆರೆ ರಾಜು, ಕೃಷ್ಣ ಸುರೇಶ್ ಸೇರಿದಂತೆ ಹಲವು ಕಲಾವಿದರನ್ನು ಕಿಚ್ಚ ಸುದೀಪ್ ಅವ್ರ ಕಿಚ್ಚ ಚಾರಿಟೆಬಲ್ ಟ್ರಸ್ಟ್ ಸದಸ್ಯರು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ.
ನನ್ನ ಕುಟುಂಬದ ಹಿರಿಯರು ನೀವು, ನೀವೆಲ್ಲಾ ಹೇಗಿದ್ದೀರಿ ಎಂಬ ಪತ್ರದ ಜೊತೆಗೆ ಬಿಸ್ಕೆಟ್ಸ್, ಸ್ವೀಟ್ಸ್, ಡ್ರೈಫ್ರೂಟ್ ಗಳನ್ನು ನೀಡಿ ಕಿಚ್ಚ ಸುದೀಪ್ ಯೋಗಕ್ಷೇಮ ವಿಚಾರಿಸಿದ್ದಾರೆ. ಕೇವಲ ಚಿತ್ರರಂಗದವ್ರನ್ನಷ್ಟೇ ಅಲ್ಲ. ಈ ಹಿಂದೆ ಸಹಾಯ ಬೇಡಿದ ಮಹಿಳಾ ಅಭಿಮಾನಿಯ ಪತಿಯ ಚಿಕಿತ್ಸೆಗೂ ನೆರವಾಗಿದ್ದರು. ತೆರೆಮೆರೆಯಲ್ಲೇ ಕೆಲಸ ಮಾಡುತ್ತಿರೋ ಕಿಚ್ಚ ಹಾಗೂ ಕಿಚ್ಚನ ತಂಡಕ್ಕೆ ಜನತೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.