ಶೇ.100ರಷ್ಟು ಥಿಯೇಟರ್ ಭರ್ತಿಗೆ ಅವಕಾಶ ಸಿಗುತ್ತಿದ್ದಂತೆ ಕನ್ನಡದಲ್ಲಿ ಈಗಾಗಲೇ ಬಿಡುಗಡೆಯಾಗ್ಬೇಕಿದ್ದ ಸಿನಿಮಾಗಳು ರಿಲೀಸ್ಗೆ ಸಜ್ಜಾಗುತ್ತಿವೆ. ದುನಿಯಾ ವಿಜಯ್ ಸಲಗ, ಕಿಚ್ಚ ಸುದೀಪ್ ಕೋಟಿಗೊಬ್ಬ 3, ಶಿವಣ್ಣನ ಭಜರಂಗಿ 2 ಸಿನಿಮಾಗಳು ಬಿಡುಗಡೆಗೆ ತುದಿಗಾಲಲ್ಲಿ ನಿಂತಿದ್ವು. ಈ ಮೂರು ಸಿನಿಮಾಗಳ ನಿರ್ಮಾಪಕರೇ ಮಾಡಿಕೊಂಡ ಒಪ್ಪಂದದ ಪ್ರಕಾರ, ಎರಡು ವಾರ ಗ್ಯಾಪ್ ಕೊಟ್ಟು ಸಿನಿಮಾ ಬಿಡುಗಡೆಯಾಗ್ಬೇಕಿತ್ತು. ಆದ್ರೀಗ ಕೋಟಿಗೊಬ್ಬ 3 ಹಾಗೂ ಸಲಗ ಸಿನಿಮಾ ಒಂದೇ ದಿನ ರಿಲೀಸ್ಗೆ ರೆಡಿಯಾಗಿದೆ. ನಿರ್ಮಾಪಕರು ತಾವೇ ಮಾಡಿಕೊಂಡ ಒಪ್ಪಂದ ಮುರಿಯಲು ಕಾರಣ ಇಲ್ಲಿದೆ ನೋಡಿ.
ನಿರ್ಮಾಪಕರ ನಿಯಮದ ಪ್ರಕಾರ ಸಲಗ ಅಕ್ಟೋಬರ್ 1ರಂದು ಬಿಡುಗಡೆಯಾಗ್ಬೇಕಿತ್ತು. ಕಿಚ್ಚ ಸುದೀಪ್ ಕೋಟಿಗೊಬ್ಬ 3 ಅಕ್ಟೋಬರ್ 14 ಹಾಗೂ ಭಜರಂಗಿ 2 ಅಕ್ಟೋಬರ್ 29ರಂದು ರಿಲೀಸ್ ಆಗ್ಬೇಕಿತ್ತು. ಆದ್ರೆ, ಸರ್ಕಾರದ ಆದೇಶ ತಡವಾಗಿ ಬಂದಿದ್ದರಿಂದ ಅಕ್ಟೋಬರ್ 1ರಂದು ರಿಲೀಸ್ ಆಗ್ಬೇಕಿದ್ದ ಸಲಗ ಅಕ್ಟೋಬರ್ 14ಕ್ಕೆ ಮುಂದೂಡಲ್ಪಟ್ಟಿತ್ತು. ಹೀಗಾಗಿ ಅಕ್ಟೋಬರ್ 14ರಂದು ರಿಲೀಸ್ ಆಗ್ಬೇಕಿದ್ದ ಕೋಟಿಗೊಬ್ಬ 3 ಅಕ್ಟೋಬರ್ 29ಕ್ಕೆ ರಿಲೀಸ್ ಆಗ್ಬೇಕಿತ್ತು. ಆದ್ರೆ, ಭಜರಂಗಿ 2 ಈಗಾಗ್ಲೇ ಅಕ್ಟೋಬರ್ 29ರಂದೇ ಬಿಡುಗಡೆ ಮಾಡೋದಾಗಿ ನಿರ್ಧರಿಸಿರೋದ್ರಿಂದ ಕೋಟಿಗೊಬ್ಬ ವಿಧಿಯಿಲ್ಲದೆ ನವೆಂಬರ್ ಎರಡನೇ ವಾರದಲ್ಲಿ ಬಿಡುಗಡೆಯಾಗ್ಬೇಕಾದ ಅನಿವಾರ್ಯತೆ ಎದುರಾಗಿತ್ತು.
ಭಜರಂಗಿ 2 ನಿರ್ಮಾಪಕ ಜಯಣ್ಣ ಬಿಡುಗಡೆ ಮುಂದೂಡದೆ ಇರೋದ್ರಿಂದ ಕೋಟಿಗೊಬ್ಬ 3 ನಿರ್ಮಾಪಕ ಸೂರಪ್ಪ ಬಾಬು ಸಿಟ್ಟಿಗೆದ್ದಿದ್ದರು. ಹೀಗಾಗಿ ತಾನು ಅಂದುಕೊಂಡ ದಿನದಂದೇ ಕೋಟಿಗೊಬ್ಬ 3 ಬಿಡುಗಡೆ ಮಾಡೋಕೆ ಮುಂದಾಗಿದ್ದಾರೆ. ಹೀಗಾಗಿ ಅಕ್ಟೋಬರ್ 14ರಂದು ದುನಿಯಾ ವಿಜಯ್ ನಟನೆಯ ಸಲಗ ಹಾಗೂ ಕಿಚ್ಚನ ಕೋಟಿಗೊಬ್ಬ 3 ಎರಡೂ ಚಿತ್ರಗಳು ಒಂದೇ ದಿನ ರಿಲೀಸ್ ಆಗಲಿವೆ.
ಸಲಗ, ಕೋಟಿಗೊಬ್ಬ 3 ಎರಡೂ ಸಿನಿಮಾಗಳು ಒಂದೇ ದಿನ ರಿಲೀಸ್ ಆಗುತ್ತಿರೋದ್ರಿಂದ ಬಾಕ್ಸಾಫೀಸ್ ಮೇಲೆ ಪರಿಣಾಮ ಬೀಳಬಹುದು. ಆದರೆ, ದಸರಾ ಹಬ್ಬವಿರೋದ್ರಿಂದ ಎರಡೂ ಸಿನಿಮಾಗಳನ್ನೂ ನೋಡುತ್ತಾರೆ ಅನ್ನೋ ನಂಬಿಕೆ ಚಿತ್ರತಂಡಕ್ಕೆ ಇದೆ.