ವಿಕ್ರಾಂತ್ ರೋಣ ಕಿಚ್ಚನ ಅಭಿಮಾನಿಗಳು ಕಾತುರದಿಂದ ಕಾಯ್ತಿರೋ ಮತ್ತೊಂದು ಸಿನಿಮಾ. ಈ ಚಿತ್ರ ಸೆಟ್ಟೇರಿದ ದಿನದಿಂದ್ಲೂ ಒಂದಲ್ಲ ಒಂದು ವಿಷಯಕ್ಕೆ ಈ ಸಿನಿಮಾ ಸದ್ದು ಮಾಡುತ್ತಲೇ ಇದೆ. ಹೀಗಾಗಿ ಕಿಚ್ಚನ ಅಭಿಮಾನಿಗಳು ವಿಕ್ರಾಂತ್ ರೋಣ ನೋಡೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಈ ಮಧ್ಯೆ ಸ್ವತ: ಸುದೀಪ್ ಖುಷಿ ವಿಷಯವೊಂದನ್ನು ಹಂಚಿಕೊಂಡಿದ್ದಾರೆ.
ಲಾಕ್ಡೌನ್ನಿಂದಾಗಿ ವಿಕ್ರಾಂತ್ ರೋಣ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಿಂತು ಹೋಗಿತ್ತು. ಆನ್ಲಾಕ್ ಆಗ್ತಿದ್ದಂತೆ ವಿಕ್ರಾಂತ್ ರೋಣ ತಂಡ ಮತ್ತೆ ಚುರುಕಾಗಿದೆ. ಒಬ್ಬೊಬ್ಬರದ್ದೇ ಡಬ್ಬಿಂಗ್ ಮಾಡುತ್ತಿದ್ದಾರೆ. ಈ ಹಿಂದೆ ರವಿಶಂಕರ್ ಗೌಡ ಡಬ್ ಮಾಡಿ ಟ್ವೀಟ್ ಮಾಡಿದ್ದರು. ಈ ಕಿಚ್ಚ ಸಿನಿಮಾದ ಪ್ರಮುಖ ದೃಶ್ಯಗಳಿಗೆ ಧ್ವನಿ ನೀಡುತ್ತಿದ್ದಾರೆ. ಈ ವಿಷಯವನ್ನು ಸ್ವತ: ಕಿಚ್ಚ ಸುದೀಪ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
‘‘ಬಹಳ ದಿನಗಳ ಬಳಿಕ ನಾನು ಸಿನಿಮಾವೊಂದಕ್ಕೆ ವಾಯ್ಸ್ ನೀಡುತ್ತಿದ್ದೇನೆಂದು ಅನಿಸುತ್ತಿದೆ. ಕೊನೆಗೂ ವಿಕ್ರಾಂತ್ ರೋಣಗೆ ನಾನು ಧ್ವನಿ ನೀಡಲು ಆರಂಭಿಸಿದ್ದೇನೆ. ನಾವು ಅಂದುಕೊಂಡಂತೆ ಸಿನಿಮಾ ಮೂಡಿಬರುತ್ತಿರೋದಕ್ಕೆ ನಾನು ಬಹಳ ಖುಷಿಯಾಗಿದ್ದೇನೆ.’’ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ರಂಗಿತರಂಗ ಸಿನಿಮಾ ನಿರ್ದೇಶಕ ಅನೂಪ್ ಭಂಡಾರಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಹೀಗಾಗಿ ಕುತೂಹಲ ಮತ್ತಷ್ಟು ದುಪ್ಪಟ್ಟಾಗಿದೆ. ಕಿಚ್ಚನ ಜೊತೆ ನಿರೂಪ್ ಭಂಡಾರಿ, ನೀತಾ ಅಶೋಕ್, ರವಿಶಂಕರ್ ಗೌಡ ಸೇರಿದಂತೆ ಹಿರಿಯ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ. ಹಾರರ್ ಹಾಗೂ ಸಸ್ಪೆನ್ಸ್ ಸಿನಿಮಾ ವಿಕ್ರಾಂತ್ ರೋಣ ಆಗಸ್ಟ್ 19ಕ್ಕೆ ಬಿಡುಗಡೆಯಾಗುತ್ತೆ ಎಂದು ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಆದ್ರೀಗ ಅದೇ ಸಮಯಕ್ಕೆ ಬಿಡುಗಡೆಯಾಗುತ್ತಾ? ಇಲ್ಲಾ ಮುಂದಕ್ಕೆ ಹೋಗುತ್ತಾ? ಅನ್ನೋ ಗೊಂದಲದಲ್ಲಿ ಅಭಿಮಾನಿಗಳಿದ್ದಾರೆ.