ಜುಲೈ 6.. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಎಂದೂ ಮರೆಯದ ದಿನ. ಸುದೀಪ್ ಅಭಿಮಾನಿಗಳು ಕೂಡ ಈ ದಿನವನ್ನು ಸದಾ ನೆನಪಿನಲ್ಲಿ ಇಟ್ಟುಕೊಂಡಿರ್ತಾರೆ. ಕಾರಣ ಕಿಚ್ಚನ ಸಿನಿ ಕರಿಯರ್ ಗೆ ಎರಡು ಬಾರಿ ದೊಡ್ಡ ಬ್ರೇಕ್ ಸಿಕ್ಕ ದಿನ ಇದು. ಸ್ಪರ್ಶ ಸಿನಿಮಾ ಮೂಲಕ ಹೀರೋ ಆಗಿ ಚಿತ್ರರಂಗಕ್ಕೆ ಪರಿಚಿತರಾಗಿದ್ದ ಸುದೀಪ್, 20 ವರ್ಷಗಳ ಹಿಂದೆ ಇದೇ ದಿನ ‘ಹುಚ್ಚ’ ಚಿತ್ರದ ಕಿಚ್ಚನಾಗಿ ಅಭಿಮಾನಿಗಳಿಗೆ ಹತ್ತಿರವಾದರು.ಅಂದು ಅಭಿಮಾನಿಗಳು ಕೊಟ್ಟ ಕಿಚ್ಚ ಅನ್ನೋ ಹೆಸರನ್ನು ಇವತ್ತಿಗೂ ಹೆಸರಿನ ಜೊತೆ ಸೇರಿಸಿಕೊಂಡಿದ್ದಾರೆ. 2001, ಜುಲೈ 6ರಂದು ಹುಚ್ಚ ಸಿನಿಮಾ ಬಿಡುಗಡೆ ಆಗಿತ್ತು. ರೀಮೇಕ್ ಸಿನಿಮಾ ಆದರೂ ಕಿಚ್ಚನ ಪಾತ್ರಕ್ಕೆ ಸುದೀಪ್ ತನು – ಮನ ಅರ್ಪಿಸಿಕೊಂಡಿದ್ದರು. ಓಂ ಪ್ರಕಾಶ್ ರಾವ್ ನಿರ್ದೇಶನದ ಚಿತ್ರದ ಎಲ್ಲಾ ಹಾಡುಗಖು ಸೂಪರ್ ಹಿಟ್ ಆಗಿತ್ತು.ಇನ್ನು ಸೆಕೆಂಡ್ ಹಾಫ್ ನಲ್ಲಿ ಹುಚ್ಚನಂತೆ ಅಭಿನಯಿಸಿ ನಿಜಕ್ಕೂ ಸುದೀಪ್ ಕಮಾಲ್ ಮಾಡಿದ್ದರು. ಅಂದು ಕಿಚ್ಚ.. ಕಿಚ್ಚ ಅಂತ ಮೆರೆಸಲು ಶುರುಮಾಡಿದ ಅಭಿಮಾನಿಗಳು ಇಂದಿಗೂ ನಿಲ್ಲಿಸಿಲ್ಲ.
ಹುಚ್ಚ ಮಾತ್ರವಲ್ಲ ಕರುನಾಡಿದ ಕಿಚ್ಚನ ಅಭಿನಯದ ಕಿಚ್ಚನ್ನು ಇಡೀ ಭಾರತಕ್ಕೆ ಪರಿಚಯಿಸಿದ ‘ಈಗ’ ಚಿತ್ರ ಕೂಡ ಇದೇ ದಿನ ತೆರೆಗೆ ಬಂದಿತ್ತು. 2012, ಜುಲೈ 6ರಂದು ರಾಜಮೌಳಿ ನಿರ್ದೇಶನದ ‘ಈಗ’ ಸಿನಿಮಾ ರಿಲೀಸ್ ಆಗಿತ್ತು. ತೆಲುಗಿನ ಈಗ ಸಿನಿಮಾ ಹಿಂದಿ, ತಮಿಳಿಗೂ ಡಬ್ ಆಗಿ ಧೂಳೆಬ್ಬಿಸಿತ್ತು. ವೈಟ್ ಕಾಲರ್ ಕೇಡಿಯಾಗಿ ಸುದೀಪ್ ಅನ್ನೋ ಪಾತ್ರದಲ್ಲಿ ಕಿಚ್ಚ ಜಾದೂ ಮಾಡಿದ್ದರು. ಇನ್ನು ನೊಣದ ಜೊತೆಗೆ ಕಾದಾಡುವ ದೃಶ್ಯಗಳಲ್ಲಿ ಅಂತೂ ಸುದೀಪ್ ಗಮನ ಸೆಳೆದಿದ್ದರು. ಯಾಕೆ ರಾಜಮೌಳಿ ತೆಲುಗಿನ ಎಲ್ಲಾ ನಟರನ್ನು ಬಿಟ್ಟು ಆ ಪಾತ್ರಕ್ಕೆ ಸುದೀಪ್ ಅವರನ್ನ ಆಯ್ಕೆ ಮಾಡಿಕೊಂಡರು ಅನ್ನೋದನ್ನ ಸಿನಿಮಾ ನೋಡಿದ್ದರೆ ಗೊತ್ತಾಗತ್ತೆ. ಇದೇ ವಿಚಾರಕ್ಕೆ ತೆಲುಗು ಕಲಾವಿದರು ಹೊಟ್ಟೆ ಕಿಚ್ಚು ಪಟ್ಟುಕೊಂಡಿದ್ದು ಇದೆ.
‘ಹುಚ್ಚ’ ಸಿನಿಮಾ ಮೂಲಕ ಆ್ಯಂಗ್ರಿ ಯಂಗ್ ಮ್ಯಾನ್ ಆಗಿ ‘ಈಗ’ ಚಿತ್ರದಿಂದ ವರ್ಸಟೈಲ್ ಆ್ಯಕ್ಟರ್ ಆಗಿ ಸುದೀಪ್ ಸಿನಿರಸಿಕರಿಗೆ ಪರಿಚಿತರಾದರು. ಅದೇ ಕಾರಣಕ್ಕೆ ಈ ದಿನವನ್ನು ಸುದೀಪ್ ಮತ್ತು ಅವರ ಅಭಿಮಾನಿಗಳು ಮರೆಯುವುದಿಲ್ಲ. ಇಂದಿಗೆ ಹುಚ್ಚ ಸಿನಿಮಾ 20 ವರ್ಷ ಪೂರೈಸಿದ್ರೆ, ‘ಈಗ’ ಸಿನಿಮಾ 9 ವರ್ಷ ಸವೆಸಿದೆ. ಸೋಷಿಯಲ್ ಮೀಡಿಯಾದಲ್ಲಿ ಸುದೀಪಿಯನ್ಸ್ ಈ ದಿನವನ್ನು ನೆನಪಿಸಿಕೊಂಡಿದ್ದಾರೆ.