ಸಿನಿಮಾ ಮಾಡೋದು ಅಂದ್ರೆ ಹಾಗೇನೇ… ಇಡೀ ಸಿನಿಮಾ ಮಾಡಿ ಮುಗಿಸುವಷ್ಟರಲ್ಲಿ ಆ ತಂಡ ಒಂದು ಕುಟುಂಬದಂತೆ ಆಗಿಬಿಟ್ಟಿರುತ್ತೆ. ಎಲ್ಲರೂ ಒಬ್ಬರನ್ನೊಬ್ಬರು ಪ್ರತಿದಿನ ನೋಡುತ್ತಾ, ಮಾತನಾಡುತ್ತಾ ಒಟ್ಟಿಗೆ ಓಡಾಡ್ಕೊಂಡು ಕೆಲಸ ಮಾಡೋದ್ರಿಂದ ಜೊತೆಗೇ ಇರೋದು ಅಭ್ಯಾಸವಾಗಿಹೋಗಿರುತ್ತದೆ. ಈಗ ಕೆಜಿಎಫ್ ತಂಡದಲ್ಲಿ ಆಗಿರೋದೂ ಅದೇನೇ.


ಕೆಜಿಎಫ್ ಬರೋಬ್ಬರಿ 5 ವರ್ಷಗಳ ಮೆಗಾ ಪ್ರಾಜೆಕ್ಟ್. ಮೊದಲ ಭಾಗ ಬಂದು ದಾಖಲೆಗಳನ್ನು ಧೂಳೆಬ್ಬಿಸಿ ಅಬ್ಬರಿಸಿ ಬೊಬ್ಬಿರಿದಿದ್ದು ಗೊತ್ತೇ ಇದೆ. ನಡುವೆ ಕೊರೊನಾ ಲಾಕ್ ಡೌನ್ ಅಂತ ಸ್ವಲ್ಪ ಬ್ರೇಕ್ ಬಿದ್ದಿದ್ದು ಬಿಟ್ರೆ ಚಿತ್ರತಂಡ ನಿರಂತರವಾಗಿ ಕೆಲಸ ಮಾಡುತ್ತಲೇ ಇದೆ. ಈಗ ಕೆಜಿಎಫ್ ಎರಡನೇ ಭಾಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಸಮಯದಲ್ಲಿ ಇಡೀ ಚಿತ್ರತಂಡ ಒಂದೆಡೆ ಸೇರಿ ಪಾರ್ಟಿ ಮಾಡಿದ್ದಾರೆ.


ನಾಯಕ ಯಶ್, ರಾಧಿಕಾ ಪಂಡಿತ್, ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರು, ವಿಲನ್ ರಾಮ್, ಉಳಿದ ಖಳನಟರು, ಸಹಾಯಕ ನಿರ್ದೇಶಕರು ಹೀಗೆ ಇಡೀ ಕೆಜಿಎಫ್ ಟೀಂ ಒಂದೆಡೆ ಸೇರಿ ಸಮಯ ಕಳೆದು ಖುಷಿಪಟ್ಟಿದ್ದಾರೆ. ಕೆಜಿಎಫ್ ಒಂದು ಕುಟುಂಬದಂತೆ ಆಗಿದೆ. ಇದು ಎಂದೂ ಮುಗಿಯದ ಪಯಣ ಎಂದಿದ್ದಾರೆ ಡೈರೆಕ್ಟರ್ ಪ್ರಶಾಂತ್ ನೀಲ್. ಜುಲೈ 16ಕ್ಕೆ ಕೆಜಿಎಫ್ ಎರಡನೇ ಭಾಗ ಬಿಡುಗಡೆಯಾಗೋಕೆ ಸಜ್ಜಾಗ್ತಿದೆ. ಸದ್ಯಕ್ಕೆ ಪಾರ್ಟಿಯ ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.