ಕೋಟಿಗಟ್ಟಲೆ ನಷ್ಟ ಆದ್ರೂ ಪರ್ವಾಗಿಲ್ಲ ಅಂತ ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್ ಈ ನಿರ್ಧಾರ ತೆಗೆದುಕೊಂಡಿದ್ದಾರಂತೆ. ಅಂದ್ಹಾಗೆ ಇದು ದೋಸ್ತಾನಾ 2 ವಿಚಾರ. ದೋಸ್ತಾನಾ 2 ಸೆಟ್ಟೇರಿ 2 ವರ್ಷಗಳಾಗಿವೆ. ಆದ್ರೆ ಕೊರೊನಾ, ಲಾಕ್ ಡೌನ್ ಕಾರಣಗಳಿಂದ ಈ ಚಿತ್ರ ಯಾಕೋ ಮುಂದಕ್ಕೆ ಹೋಗಲೇ ಇಲ್ಲ. ಇಷ್ಟು ದಿನ ಸೈಲೆಂಟಾಗಿದ್ದ ಚಿತ್ರತಂಡ ಈಗ ಧಿಡೀರನೆ ಶಾಕಿಂಗ್ ನ್ಯೂಸ್ ಕೊಟ್ಟಿದೆ.
ದೋಸ್ತಾನಾ ಮೊದಲ ಅವತರಣಿಕೆಯಲ್ಲಿ ಜಾನ್ ಅಬ್ರಹಾಂ, ಅಭಿಷೇಕ್ ಬಚ್ಚನ್ ಮತ್ತು ಪ್ರಿಯಾಂಕಾ ಚೋಪ್ರಾ ನಟಿಸಿದ್ದರು. ಆ ಚಿತ್ರ ಸೂಪರ್ ಹಿಟ್ ಕೂಡಾ ಆಗಿತ್ತು. ಅದೇ ಜೋಶ್ ನಲ್ಲಿ ನಿರ್ಮಾಣ ಸಂಸ್ಥೆ ಧರ್ಮ ಪ್ರೊಡಕ್ಷನ್ಸ್ ದೋಸ್ತಾನಾ 2 ಮಾಡಲು ಹೊರಟಿದೆ. ಇದಕ್ಕಾಗಿ ಕಾರ್ತಿಕ್ ಆರ್ಯನ್, ಜಾಹ್ನವಿ ಕಪೂರ್ ಮತ್ತು ಹೊಸಾ ಪ್ರತಿಭೆ ಲಕ್ಷ್ಯರನ್ನು ಮುಖ್ಯ ಪಾತ್ರಗಳಿಗೆ ಆಯ್ಕೆ ಮಾಡಲಾಗಿತ್ತು.
ಆದ್ರೆ ಈ ಚಿತ್ರದಿಂದ ಅಧಿಕೃತವಾಗಿ ಕಾರ್ತಿಕ್ ಆರ್ಯನ್ ರನ್ನು ಕೈಬಿಡಲಾಗಿದೆ ಎಂದು ಧರ್ಮ ಪ್ರೊಡಕ್ಷನ್ಸ್ ಹೇಳಿದೆ. ಅಷ್ಟೇ ಅಲ್ಲ, ನಿರ್ಮಾಪಕ ಕರಣ್ ಜೋಹರ್ ಸಾಮಾಜಿಕ ಜಾಲತಾಣದಲ್ಲಿ ಕಾರ್ತಿಕ್ ಆರ್ಯನ್ ರನ್ನು ಅನ್ ಫಾಲೊ ಕೂಡಾ ಮಾಡಿದ್ದಾರೆ. ಈಗಾಗಲೇ 2019ರಲ್ಲಿ ಚಿತ್ರದ ಕೆಲ ಭಾಗಗಳ ಚಿತ್ರೀಕರಣ ಕೂಡಾ ಮಾಡಿ ಮುಗಿಸಲಾಗಿತ್ತು. ಈಗ ಕಾರ್ತಿಕ್ ಆರ್ಯನ್ ರನ್ನು ಕೈಬಿಟ್ಟಿದ್ದರಿಂದ ಧರ್ಮ ಪ್ರೊಡಕ್ಷನ್ಸ್ ಗೆ ಸುಮಾರು 20 ಕೋಟಿ ರೂಪಾಯಿ ನಷ್ಟವಾಗುತ್ತದೆಯಂತೆ.
ಅದ್ಯಾವುದನ್ನೂ ಲೆಕ್ಕಿಸದೆ ಕಾರ್ತಿಕ್ ಆರ್ಯನ್ ಗೆ ಟಾಟಾ ಬೈ ಹೇಳಿದೆ ಧರ್ಮ ಪ್ರೊಡಕ್ಷನ್ಸ್. ಕಾರ್ತಿಕ್ ಆರ್ಯನ್ ನಡವಳಿಕೆಯೇ ಇದಕ್ಕೆ ಕಾರಣ ಎನ್ನುತ್ತಿವೆ ಮೂಲಗಳು. ಕೆಲವೇ ಚಿತ್ರಗಳನ್ನು ಮಾಡಿದ್ದರೂ ಕಾರ್ತಿಕ್ ಆರ್ಯನ್ ಸಾಕಷ್ಟು ಹೆಸರು ಸಂಪಾದಿಸಿದ್ದಾರೆ, ಅಲ್ಲದೇ ಅವರ ಮ್ಯಾನರಿಸಂಗಳು ಕೂಡಾ ಫೇಮಸ್. ಆದ್ರೆ ಆಟಿಟ್ಯೂಡ್ ಕಾರಣಕ್ಕೆ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯೊಂದು ಇವರ ಕೈಬಿಟ್ಟಿದ್ದು ಬಾಲಿವುಡ್ ಅಂಗಳದಲ್ಲಿ ಸಾಕಷ್ಟು ಚರ್ಚೆಯಲ್ಲಿದೆ, ಇದು ಕಾರ್ತಿಕ್ ಆರ್ಯನ್ ವೃತ್ತಿ ಬದುಕಿನ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎನ್ನುವುದನ್ನು ಕಾದು ನೋಡಬೇಕು.