ರಾಜ್ಯದಲ್ಲಿ ಕೊರೊನಾ 2ನೇ ಅಲೆ ಹೆಚ್ಚಾಗಿರೋ ಹಿನ್ನೆಲೆಯಲ್ಲಿ ಸರ್ಕಾರ ಕಠಿಣ ನಿಯಮಗಳನ್ನ ಜಾರಿ ಮಾಡಿದೆ. ಏಪ್ರಿಲ್ 02ರಿಂದ್ಲೇ ಈ ನಿಯಮ ಜಾರಿಯಲ್ಲಿದ್ದು, ಸಾರ್ವಜನಿಕ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಿದೆ. ಮತ್ತೆ ಜಿಮ್, ಸ್ವಿಮ್ಮಿಂಗ್ ಪೂಲ್ಗಳನ್ನ ಬಂದ್ ಮಾಡಿದೆ. ಎಲ್ಲಕ್ಕಿಂತ ಹೆಚ್ಚಾಗಿ 8 ಜಿಲ್ಲೆಯ ಸಿನಿಮಾ ಹಾಲ್ಗಳಲ್ಲಿ ಶೇ. 50ರಷ್ಟು ಸೀಟು ಕಟ್ ಮಾಡಿ ಆದೇಶ ಹೊರಡಿಸಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಿಬಿಎಂಪಿ, ಮೈಸೂರು, ಕಲಬುರ್ಗಿ, ದಕ್ಷಿಣ ಕನ್ನಡ, ಉಡುಪಿ, ಬೀದರ್, ಧಾರವಾಡ ಜಿಲ್ಲೆಗಳಲ್ಲಿರುವ ಸಿನಿಮಾ ಹಾಲ್ಗಳಲ್ಲಿ ಶೇ. 50ರಷ್ಟು ಸೀಟು ಭರ್ತಿಗೆ ಮಾತ್ರ ಅವಕಾಶ ನೀಡಿದೆ. ಹೀಗಾಗಿ ಸ್ಯಾಂಡಲ್ವುಡ್ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ.
ಇತ್ತೀಚೆಗಷ್ಟೇ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಯುವರತ್ನ ಸಿನಿಮಾ ರಿಲೀಸ್ ಆಗಿತ್ತು. ಅಪ್ಪು ಸಿನಿಮಾ ಬಿಡುಗಡೆಯಾದ ಕೇವಲ ಎರಡೇ ದಿನಗಳಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಹೀಗಾಗಿ ಯುವರತ್ನ ತಂಡ ಕಂಗಾಲಾಗಿದೆ. ರಾಜ್ಯ ಸರ್ಕಾರ ಈ ನಿರ್ಧಾರವನ್ನ ಹಿಂಪಡೆಯುವಂತೆ ಆಗ್ರಹಿಸಿದೆ.
ಯುವರತ್ನ ಸಿನಿಮಾಗೂ ಮುನ್ನ ಎರಡು ದೊಡ್ಡ ಸಿನಿಮಾಗಳು ಬಿಡುಗಡೆಯಾಗಿವೆ. ಧ್ರುವ ಸರ್ಜಾ ಅಭಿನಯದ ಪೊಗರು.. ದರ್ಶನ್ ನಟನೆಯ ರಾಬರ್ಟ್ ರಿಲೀಸ್ ಆಗಿ ಬಾಕ್ಸಾಫೀಸ್ನಲ್ಲಿ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದೆ. ಈಗ ಯುವರತ್ನ ಸಿನಿಮಾಗೂ ಪ್ರೇಕ್ಷಕರಿಗೆ ಮೆಚ್ಚುಗೆ ವ್ಯಕ್ತವಾಗುತ್ತಿತ್ತು. ಅಷ್ಟ್ರಲ್ಲೇ ರಾಜ್ಯ ಸರ್ಕಾರ ಶೇ.50ರಷ್ಟು ಸೀಟು ಕಟ್ ಮಾಡಿದ್ದು ಕನ್ನಡ ಚಿತ್ರರಂಗ ನುಂಗಲಾರದ ತುತ್ತಾಗಿದೆ. ಯಾಕಂದ್ರೆ, ಯುವರತ್ನ ಬಳಿಕ ದುನಿಯಾ ವಿಜಿಯ ಸಲಗ, ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ 3 ರಿಲೀಸ್ ಆಗ್ಬೇಕಿತ್ತು.