ರಿಷಬ್ ಶೆಟ್ಟಿ ಅಭಿನಯದ ಬೆಲ್ ಬಾಟಂ ಸಿನಿಮಾ ಹಿಟ್ ಆಗಿದ್ದು, ಅದರ ತೆಲುಗು, ತಮಿಳು, ಹಿಂದಿ ರೀಮೇಕ್ ರೈಟ್ಸ್ ಭರ್ಜರಿ ಬೆಲೆಗೆ ಮಾರಾಟವಾಗಿದ್ದು ಗೊತ್ತೇಯಿದೆ. ಅದರ ಬೆನ್ನಲ್ಲೇ ಬಾಲಿವುಡ್ ನಲ್ಲಿ ಅಕ್ಷಯ್ ಕುಮಾರ್ ಬೆಲ್ ಬಾಟಂ ಟೈಟಲ್ ನಲ್ಲಿ ಸಿನಿಮಾ ಶುರು ಮಾಡಿದ್ದರು. ಅದು ಕನ್ನಡ ಸಿನಿಮಾ ರೀಮೇಕ್ ಅನ್ನೋ ಗುಮಾನಿ ಎದ್ದಿತ್ತು. ಆದರೆ ಸ್ಟಂಟ್ ಮಾಸ್ಟರ್ ಕಮ್ ನಿರ್ದೇಶಕ ರವಿವರ್ಮಾ ಅಕ್ಷಯ್ ಕುಮಾರ್ ಅಭಿನಯದ ಬೆಲ್ ಬಾಟಂ ಚಿತ್ರತಂಡದ ಮೇಲೆ ಗರಂ ಆಗಿದ್ದರು ಕಾರಣ ಚಿತ್ರದ ಹಿಂದಿ ರೀಮೇಕ್ ರೈಟ್ಸ್ ವರ್ಮಾ ಖರೀದಿಸಿದ್ದರು. ಅದೇ ಕಾರಣಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಇದನ್ನ ಹಿಂದಿ ಬೆಲ್ ಬಾಟಂ ತಂಡ ಒಪ್ಪಲಿಲ್ಲ. ನಮ್ಮದೇ ಸ್ವತಃ ಕಥೆ ಅಂತ ವಾದಿಸಿದ್ದರು. ಇಷ್ಟಾದರೂ ಕೆಲವರಲ್ಲಿ ಅನುಮಾನ ಇತ್ತು. ಇದೀಗ ಹಿಂದಿ ಬೆಲ್ ಬಾಟಂ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಎಲ್ಲಾ ಅನುಮಾನಕ್ಕೂ ಬ್ರೇಕ್ ಬಿದ್ದಿದೆ.
ಬಾಲಿವುಡ್ ನಿರ್ದೇಶಕ ನಿಖಿಲ್ ಅದ್ವಾನಿ ಬಳಿ, ರವಿವರ್ಮಾ ಬೆಲ್ಬಾಟಂ ರೀಮೇಕ್ ಬಗ್ಗೆ ಚರ್ಚಿಸಿದ್ದರಂತೆ. ಅದೇ ನಿಖಿಲ್ ಅದ್ವಾನಿ ಹಿಂದಿ ಬೆಲ್ಬಾಟಂ ಟೀಂನಲ್ಲಿ ಕಾಣಿಸಿಕೊಂಡಿದ್ದು, ಎಲ್ಲಾ ಅನುಮಾನಗಳಿಗೆ ಕಾರಣವಾಗಿತ್ತು. ಈ ಬಗ್ಗೆ ಚಿತ್ರತಂಡಕ್ಕೆ ರವಿವರ್ಮಾ ನೋಟಿಸ್ ಸಹ ಕೊಟ್ಟಿದ್ದರು. ನಂತರ ಅವರು ರಾಜಿ ಸಂಧಾನಕ್ಕೆ ಕರೆದಿದ್ದಾರೆ ಅಂತೆಲ್ಲಾ ಹೇಳಿದ್ದರು. ಇದೀಗ ಹಿಂದಿ ಬೆಲ್ ಬಾಟಂ ಟ್ರೈಲರ್ ರಿಲೀಸ್ ಆಗಿದ್ದು, ಇದು ಕನ್ನಡ ಸಿನಿಮಾ ರೀಮೇಕ್ ಅಲ್ಲ ಅನ್ನೋದು ಗೊತ್ತಾಗ್ತಿದೆ. ಕನ್ನಡದ ಬೆಲ್ ಬಾಟಂ ರೆಟ್ರೋ ಸ್ಟೈಲ್ ಸಿನಿಮಾ. ಅದು ಕೂಡ 80ರ ದಶಕದ ಚಿತ್ರ. ಆದರೆ ಸ್ಪೈ ಥ್ರಿಲ್ಲರ್ ಕಥೆಯನ್ನು ಹೇಳ್ತಿದ್ದಾರೆ. ಚಿತ್ರದ ಟ್ರೈಲರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ.
ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ, ರಂಜಿತ್ ತಿವಾರಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಅಕ್ಷಯ್ ಕುಮಾರ್ ರಾ ಏಜೆಂಟ್ ರೋಲ್ ನಲ್ಲಿ ಬಣ್ಣ ಹಚ್ಚಿದ್ದಾರೆ. ಫ್ಲೈಟ್ ಹೈಜಾಕ್ ಪ್ರಕರಣವನ್ನು ಭೇದಿಸುವ ಆಫಿಸರ್ ಆಗಿ ಅಕ್ಕಿ ಕಮಾಲ್ ಮಾಡೋಕೆ ಬರ್ತಿದ್ದಾರೆ. ಆಗಷ್ಟ್ 19ರಂದು 2D ಜೊತೆಗೆ 3Dಯಲ್ಲೂ ಬೆಲ್ ಬಾಟಂ ಸಿನಿಮಾ ತೆರೆಗೆ ಬರಲಿದೆ.