ಕೊರೊನಾ ಹಾವಳಿಯಿಂದ ಅದೆಷ್ಟೋ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದ್ರಲ್ಲೂ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರು, ತಂತ್ರಜ್ಞರ ಪರಿಸ್ಥಿತಿಯನ್ನೂ ಹೇಳ ತೀರದು. ಇಲ್ಲೊಬ್ಬ ಹಿರಿಯ ನಿರ್ದೇಶಕ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರ ಆರೋಗ್ಯ ಸರಿಯಿಲ್ಲ. ಚಿಕಿತ್ಸೆ, ಮನೆ ಬಾಡಿಗೆ, ಮಗನ ಫೀಸ್ ಕಟ್ಟೋಕೂ ಹಣವಿಲ್ಲದಂತಹ ಪರಿಸ್ಥಿತಿ. ಯಾರು ಆ ನಿರ್ದೇಶಕರು? ಯಾವ ಸಿನಿಮಾ? ಈ ವರದಿ ನೋಡಿ.
80ರ ದಶಕದಲ್ಲಿ ತೆರೆಕಂಡ ಸೂಪರ್ ಹಿಟ್ ಸಿನಿಮಾಗಳ ನಿರ್ದೇಶಕ ಎಸ್ ಉಮೇಶ್ ಕಷ್ಟದಲ್ಲಿದ್ದಾರೆ. 1988ರಲ್ಲಿ ಕಾಶಿನಾಥ್, ಭವ್ಯ ನಟಿಸಿದ ಅವಳೇ ನನ್ನ ಹೆಂಡ್ತಿ ಚಿತ್ರವನ್ನು ಎಸ್ ಉಮೇಶ್ ನಿರ್ದೇಶಿಸಿದ್ದರು. ಮೊದಲ ಸಿನಿಮಾದಲ್ಲೇ ಗೆದ್ದಿದ್ದ ನಿರ್ದೇಶನ ಸಿನಿಮಾ ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲೂ ರಿಮೇಕ್ ಆಗಿತ್ತು. ತಮಿಳಿನಲ್ಲಿ ನಿರ್ಮಾಣಗೊಂಡ ಚಿತ್ರವನ್ನು ಉಮೇಶ್ ಅವರೇ ನಿರ್ದೇಶಿಸಿದ್ರು. ಈ ನಿರ್ದೇಶಕನೇ ಈಗ ಸಂಕಷ್ಟದಲ್ಲಿದ್ದಾರೆ. ಚಿಕಿತ್ಸೆ ಹಣವಿಲ್ಲದೆ ಪರದಾಡುತ್ತಿದ್ದಾರೆ.
ಕನ್ನಡದಲ್ಲಿ ಸುಮಾರು 24 ಸಿನಿಮಾಗಳನ್ನು ನಿರ್ದೇಶಿಸಿದ ನಿರ್ದೇಶಕ ಉಮೇಶ್ ಅವರ ಒಂದು ಕಿಡ್ನಿ ನಿಷ್ಕ್ರಿಯಗೊಂಡಿದೆ. ಆದ್ರೆ, ಇನ್ನೊಂದು ಕಿಡ್ನಿ ಕೂಡ ನಿಷ್ಕ್ರಿಯಗೊಳ್ಳಬಹುದೆಂಬ ಆತಂಕದಲ್ಲಿದ್ದಾರೆ. ಇದಕ್ಕೆ ಲಸಿಕೆ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಒಂದು ಇಂಜೆಕ್ಷನ್ ಬೆಲೆ 2600 ರೂಪಾಯಿ ಇದ್ದು, ಪ್ರತಿಬಾರಿ ಚಿಕಿತ್ಸೆಗೆ ಹೋದಾಗ ಸಾಕಷ್ಟು ಹಣ ಖರ್ಚಾಗುತ್ತಿದೆ. ಅಲ್ಲದೆ ಮನೆ ಬಾಡಿಗೆ ಕಟ್ಟೋಕೂ ಹಣವಿಲ್ಲ. ಓದುತ್ತಿರೋ ಮಗನ ಫೀಸ್ ಕಟ್ಟಲೂ ಕಷ್ಟವಾಗುತ್ತಿದೆ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ.
ಯಶಸ್ಸು ಕಂಡ ನಿರ್ದೇಶಕನ ಒಂದು ತಪ್ಪು ಅವರನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದೆ. ಗೆಲುವಿನಲ್ಲಿದ್ದ ನಿರ್ದೇಶಕ ಬನ್ನಿ ಒಂದ್ಸಲ ನೋಡಿ ಅನ್ನೋ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ರು. ಈ ಚಿತ್ರ ಹೀನಾಯವಾಗಿ ಸೋಲು ಕಂಡಿತು. ಏಳು ಲಕ್ಷ ಸಾಲ ತಲೆ ಬಂದಿತ್ತು.
ಅಂದಿನಿಂದ ಉಮೇಶ್ ಸಂಕಷ್ಟದಲ್ಲೇ ಜೀವನ ನಡೆಸುವಂತಾಗಿದೆ. ಸದ್ಯ ಅನಾರೋಗ್ಯದಿಂದ ಬಳಲುತ್ತಿರೋ ಇವ್ರಿಗೆ ನೆರವಿನ ಅಗತ್ಯವಿದೆ. ಉಮೇಶ್ ಕೂಡ ಸಹಾಯ ಮಾಡಿದರೆ ವಿನಮ್ರವಾಗಿ ಸ್ವೀಕರಿಸುವೆ ಎಂದು ಹೇಳಿದ್ದಾರೆ.