ಕೊರೋನಾ ಲಾಕ್ಡೌನ್ನಿಂದ ಚಿತ್ರರಂಗದಲ್ಲಿ ಮೌನ ಆವರಿಸಿದೆ. ಸಿನಿಮಾ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್, ರಿಲೀಸ್ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ. ಹೊಸ ಸಿನಿಮಾಗಳ ಟೀಸರ್, ಸಾಂಗ್, ಟ್ರೈಲರ್ ರಿಲೀಸ್ ಆಗ್ತಿಲ್ಲ. ಈಗ ಪ್ರಮೋಷನ್ ಮಾಡಿದ್ರು, ಪ್ರಯೋಜನವಿಲ್ಲ ಅಂತ ಫಿಲ್ಮ್ ಮೇಕರ್ಸ್ ನಿರ್ಧರಿಸಿದ್ದಾರೆ. ಸ್ಪೆಷಲ್ ಅಕೇಷನ್ಗಳಲ್ಲಿ ಆಗೊಂದು ಈಗೊಂದು ಟೀಸರ್, ಲಿರಿಕಲ್ ವೀಡಿಯೋ ಸಾಂಗ್ ರಿಲೀಸ್ ಆಗುತ್ತೆ. ಅರ್ಜುನ್ ಜನ್ಯಾ ಟ್ಯೂನು, ವಿಜಯ್ ಪ್ರಕಾಶ್ ವಾಯ್ಸ್ನಲ್ಲಿ ಸಾಕಷ್ಟು ಸಾಂಗ್ಸ್ ಬಂದು ಸೂಪರ್ ಹಿಟ್ ಆಗಿದೆ. ಲಾಕ್ಡೌನ್ನಲ್ಲಿ ಈ ಜೋಡಿ ಹೊಸ ಹಾಡೊಂದಕ್ಕೆ ಒಂದಾಗಿದೆ. ಗೌಸ್ ಪೀರ್ ಸಾಹಿತ್ಯದಲ್ಲಿ ಈ ಹಾಡು ಮೂಡಿ ಬಂದಿದೆ. ಆದರೆ ಇದು ಸಿನಿಮಾ ಸಾಂಗ್ ಅಲ್ಲ. ಬದಲಿಗೆ ವಿಶ್ವ ಪರಿಸರ ದಿನಾಚರಣೆಯ ವಿಶೇಷವಾಗಿ ಮೂಡಿಬಂದಿರೋ ಲಿರಿಕಲ್ ವೀಡಿಯೋ ಸಾಂಗ್.
‘ವನದೇವಿ ಪ್ರೀತಿಯ ವಂದನೆ’ ಅಂತ ಶುರುವಾಗುವ ಹಾಡು ವಿಶ್ವ ಪರಿಸರ ದಿನಾಚರಣೆಗೆ ನಿಜಕ್ಕೂ ಒಳ್ಳೆ ಉಡುಗೊರೆ. ಪರಿಸರ ಸಂರಕ್ಷಣೆಯ ಕುರಿತಾಗಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಜೂನ್ 5ರಂದು ವಿಶ್ವ ಪರಿಸರ ದಿನವೆಂದು ಆಚರಿಸಲಾಗುತ್ತದೆ. ಹೀಗಿರುವಾಗ ಪರಿಸರ ಕಾಳಜಿಯ ಕುರಿತಾಗಿ ಗಮನಹರಿಸಲೇಬೇಕಿದೆ. ನಿನ್ನೆ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಲು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ಪ್ರಕೃತಿ ಸೌಂದರ್ಯದ ವಿಷ್ಯುವಲ್ಸ್ ಜೊತೆಗೆ ಬಹಳ ಸೊಗಸಾಗಿ ‘ವನದೇವಿ ಪ್ರೀತಿಯ ವಂದನೆ’ ಲಿರಿಕಲ್ ವೀಡಿಯೋ ಸಾಂಗ್ನ ಕಟ್ಟಿಕೊಡಲಾಗಿದೆ.
‘ಮಳೆಯ ಬಿಲ್ಲಿಗೂ ನಿನ್ನ ನೋಡೋ ಆಸೆ ಅತಿಯಾಗಿ ಬಂದು ನೀಲಿ ಬಾನಲಿ ಮೂಡಿದೆ. ಕೆಂಪು ಸೂರ್ಯನ ಹೊಂಗಿರಣ ಕೂಡ ಧರೆಯಲ್ಲಿ ಮೊದಲು ನಿನ್ನ ಸ್ಪರ್ಶವ ಮಾಡಿದೆ’ ಅನ್ನೋ ಸಾಲುಗಳು ಬಹಳ ಸೊಗಸಾಗಿದೆ. ಅರ್ಜುನ್ ಜನ್ಯಾ ಇಂಪಾದ ಟ್ಯೂನು, ವಿಜಯ ಪ್ರಕಾಶ್ ತಂಪಾದ ದನಿ ಮತ್ತಷ್ಟು ಮಜವಾಗಿದೆ. ನೀವು ಒಮ್ಮೆ ಕೇಳಿ ನೋಡಿ, ಇಷ್ಟವಾಗುವುದರಲ್ಲಿ ಸಂದೇಹವಿಲ್ಲ