‘ತಿಥಿ’ ಸಿನಿಮಾದಲ್ಲಿ ನಟಿಸಿ ರಾಜ್ಯಪ್ರಶಸ್ತಿ ಗೆದ್ದ ನಟಿ ಪೂಜಾ. ಮೊದಲ ಚಿತ್ರದಲ್ಲಿ ಕಾವೇರಿ ಅನ್ನೋ ಹಳ್ಳಿ ಹುಡುಗಿಯ ಪಾತ್ರದಲ್ಲಿ ನಟಿಸಿ, ಮೋಡಿ ಮಾಡಿದ ಪೂಜಾ ‘ದಾರಿ ಯಾವುದಯ್ಯಾ ವೈಕುಂಠಕೆ’ ಅನ್ನೋ ಮತ್ತೊಂದು ಚಿತ್ರದಲ್ಲೂ ನಟಿಸಿದ್ದು, ಈ ಚಿತ್ರವನ್ನು ಸಾಕಷ್ಟು ಪ್ರಶಸ್ತಿಗಳು ಹುಡುಕಿ ಬರ್ತಿದೆ. ಪೂಜಾ ನಟಿಸಿರೋ ಮೂರನೇ ಸಿನಿಮಾ ‘ಯುಟರ್ನ್-2’. ಪವನ್ಕುಮಾರ್ ನಿರ್ದೇಶನದ ‘ಯುಟರ್ನ್’ ಚಿತ್ರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಚಂದ್ರು ಓಬಯ್ಯ ನಿರ್ದೇಶಿಸಿ, ನಟಿಸಿರೋ ಸಿನಿಮಾ ಇದು. ಈ ಚಿತ್ರದಲ್ಲಿ ಏನಕ್ಕೂ ಕೇರ್ ಮಾಡದ, ಉಡಾಫೆ ಹುಡುಗಿಯ ಪಾತ್ರದಲ್ಲಿ ಪೂಜಾ ನಟಿಸಿದ್ದಾರೆ. ಬುಲೆಟ್ ರೈಡಿಂಗ್ ಕೂಡ ಮಾಡಿದ್ದಾರಂತೆ. ಹೊಸ ಸಮಾಚಾರ ಏನಪ್ಪಾ ಅಂದ್ರೆ ಚಿತ್ರದ ಲಿರಿಕಲ್ ಸಾಂಗ್ ಒಂದು ರಿಲೀಸ್ ಆಗಿದೆ.
‘ಲವ್ವಲ್ಲಿ ಬಿದ್ದೆ’ ಅಂತ ಶುರುವಾಗುವ ರೊಮ್ಯಾಂಟಿಕ್ ಹಾಡಿಗೆ ಸ್ವತಃ ಚಿತ್ರದ ನಿರ್ದೇಶಕ ಚಂದ್ರು ಓಬಯ್ಯ ಟ್ಯೂನ್ ಹಾಕಿದ್ದಾರೆ. ಸಾಹಿತ್ಯ ಕೂಡ ನಿರ್ದೇಶಕರದ್ದೇ. ಅನನ್ಯಾ ಭಟ್ ವಾಯ್ಸ್ನಲ್ಲಿ ಹಾಡು ಸಖತ್ ಮಜಾವಾಗಿದೆ. ಹುಡುಗಿ ತನ್ನ ಇಷ್ಟದ ಹುಡುಗನನ್ನ ನೋಡಿ ಪ್ರೀತಿ ಹುಟ್ಟುವ ಸನ್ನಿವೇಶದಲ್ಲಿ ಹಾಡು ಚಿತ್ರಿತವಾಗಿದೆ.
ಅನನ್ಯಾ ಭಟ್ ಸಾಂಗ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಹಾಡು ಹಾಡ್ತಿರೋ ವೀಡಿಯೋ ಜೊತೆಗೆ ಚಿತ್ರದ ಒಂದಷ್ಟು ಫೋಟೋಸ್ ಮಿಕ್ಸ್ ಮಾಡಿ ಲಿರಿಕಲ್ ಸಾಂಗ್ ಕಟ್ಟಿಕೊಡಲಾಗಿದೆ. ಆನಂದ್ ಸಂಪಂಗಿ ‘ಯುಟರ್ನ್-2’ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಲಾಕ್ಡೌನ್ನಿಂದ ಸಿನಿಮಾ ಶೂಟಿಂಗ್ ನಿಂತು ಹೋಗಿದೆ. ಶೂಟಿಂಗ್ ಅವಕಾಶ ಸಿಕ್ತಿದ್ದಂತೆ ಶೂಟಿಂಗ್ ಮುಗಿಸಿ ಸಿನಿಮಾ ರಿಲೀಸ್ಗೆ ಪ್ಲಾನ್ ಮಾಡಲಾಗ್ತಿದೆ. ಅಲ್ಲಿವರೆಗೂ ಈ ಮೆಲೋಡಿ ಸಾಂಗ್ ಕೇಳ್ತಾ ಇರಿ.