ದರ್ಶನ್ ಹಾಗೂ ಜೋಗಿ ಪ್ರೇಮ್ ಇಬ್ಬರ ಕಾಂಬಿನೇಷನ್ನಲ್ಲೊಂದು ಸಿನಿಮಾ ಬರ್ಬೇಕು ಅನ್ನೋದು ಅಭಿಮಾನಿಗಳ ಕನಸು. ಇದ್ದಿಕ್ಕಿದ್ದ ಹಾಗೇ ನಿರ್ದೇಶಕ ಪ್ರೇಮ್ ಡಿ ಬಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದರು. ಕರಿಯ ಬಳಿಕ ಮತ್ತೆ ಗೆಳೆಯ ದರ್ಶನ್ ಸಿನಿಮಾ ಮಾಡ್ತೀನಿ. ಇವತ್ತೇ ಸಿನಿಮಾವನ್ನೂ ಘೋಷಣೆ ಮಾಡುತ್ತೇನೆಂದು ಟ್ವೀಟ್ ಮಾಡಿದ್ದರು. ಆ ಟ್ವೀಟ್ಗೆ ರಕ್ಷಿತಾ ಪ್ರೇಮ್ ಸಖತ್ ಟ್ವಿಸ್ಟ್ ಕೊಟ್ಟಿದ್ದಾರೆ. ಅದೇನು ಅಂತ ನೋಡುವ ಮೊದಲು ಪ್ರೇಮ್ ಟ್ವೀಟ್ನಲ್ಲೇನಿದೆ ಅನ್ನೋದನ್ನು ನೋಡಿ..
‘‘ಎಲ್ಲರೂ ನಮ್ಮ ಮುಂದಿನ ಸಿನಿಮಾ ಯಾವುದು ಅಂತ ಕೇಳುತ್ತಲೇ ಇದ್ರಿ. ನಾನು ಏಕ್ ಲವ್ ಯಾ ತೆರೆಕಂಡ ಬಳಿಕ ದರ್ಶನ್ಗೆ ಸಿನಿಮಾ ಮಾಡಲಿದ್ದೇನೆ. ಆ ಸಿನಿಮಾ ಅಂತ ಇಂದೇ ಘೋಷಣೆ ಮಾಡಲಿದ್ದೇನೆ. ಇದು ದರ್ಶನ್ ಅವ್ರ 55ನೇ ಸಿನಿಮಾ ಆಗಿದ್ದು, ಫಸ್ಟ್ ಲುಕ್ ಹಾಗೂ ಟೈಟಲ್ ಎರಡನ್ನೂ ಆದಷ್ಟು ಬೇಗ ಘೋಷಣೆ ಮಾಡುತ್ತೇನೆ’’ ಎಂದು ಟ್ವೀಟ್ ಮಾಡಿದ್ದರು. ಅಲ್ಲದೆ ರಾಕ್ಲೈನ್ ಎಂಟರ್ಟೈನ್ಮೆಂಟ್ ಹೆಸರಿಗೆ ಟ್ಯಾಗ್ ಕೂಡ ಮಾಡಿದ್ದರು.
ಪ್ರೇಮ್ ಟ್ವೀಟ್ ಹೊರಬೀಳುತ್ತಿದ್ದಂತೆ ದರ್ಶನ್ ಅಭಿಮಾನಿಗಳು ಖುಷಿಯಾಗಿದ್ದರು. ಕರಿಯಾ ಬಳಿಕ ಇಬ್ಬರ ಕಾಂಬಿನೇಷನ್ನಲ್ಲಿ ಸಿನಿಮಾ ಬರ್ತಿದೆ ಅಂತ ಖುಷಿ ಪಟ್ಟಿದ್ದರು. ರಾಬರ್ಟ್ ಬಳಿಕ ದರ್ಶನ್ ಯಾವ ಸಿನಿಮಾ ಮಾಡ್ತಾರೆ ಅನ್ನೋ ಗೊಂದಲಕ್ಕೆ ತೆರೆಬಿದ್ದಂತಾಗಿತ್ತು. ಆದ್ರೆ, ದಿಢೀರನೇ ರಕ್ಷಿತಾ ಪ್ರೇಮ್ ಟ್ವೀಟ್ ಈ ಎಲ್ಲಾ ಆಸೆಗಳಿಗೂ ತಣ್ಣೀರು ಎರಚಿಬಿಟ್ಟಿತು.
ಅಸಲಿಗೆ ಇದು ನಿರ್ದೇಶಕ ಪ್ರೇಮ್ ಅವರ ಟ್ವಿಟ್ಟರ್ ಅಕೌಂಟ್. ಈ ಖಾತೆಯಿಂದ ಯಾರೋ ಟ್ವೀಟ್ ಮಾಡಿ ಟ್ಯಾಗ್ ಮಾಡಿದ್ದರು. ತಕ್ಷಣವೇ ರಕ್ಷಿತಾ ಪ್ರೇಮ್ ಮರು ಟ್ವೀಟ್ ಮಾಡಿ ‘‘ಇದು ಪ್ರೇಮ್ ಖಾತೆಯಲ್ಲ. ಯಾರು ಈ ಟ್ವೀಟ್ ಮಾಡಿದ್ದಾರೋ ಅವ್ರಿಗೆ ಒಳ್ಳೆದಾಗಲಿ. ಇಬ್ಬರೂ ಒಟ್ಟಿಗೆ ಕೆಲಸ ಮಾಡುವಂತಾಗಲಿ. ಈ ಸುದ್ದಿ ನಿಜವಲ್ಲವೆಂದು’’ ಹೀಗೆಂದು ಟ್ವೀಟ್ ಮಾಡಿದ್ದಾರೆ.
ಕರಿಯ ಬಳಿಕ ದರ್ಶನ್ ಸಿನಿಮಾ ಮಾಡುತ್ತಾರೆ ಅನ್ನೋ ಸುದ್ದಿ ಬಹಳ ದಿನಗಳಿಂದ ಕೇಳುತ್ತಲೇ ಇದೆ. ಅದಕ್ಕೆ ತಕ್ಕಂತೆ ನಕಲಿ ಟ್ವೀಟ್ ಕೆಲ ಹೊತ್ತು ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದಂತೂ ನಿಜ.