ಕೊರೊನಾ ಅದೆಷ್ಟು ಕ್ರೂರಿ ಅನ್ನೋದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ? ದಕ್ಷಿಣ ಭಾರತೀಯ ಚಿತ್ರರಂಗದ ದಿಗ್ಗಜರೆಲ್ಲ ಒಬ್ಬೊಬ್ಬರಾಗೇ ಕೊರೊನಾಗೆ ಬಲಿಯಾಗ್ತಿದ್ದಾರೆ. ಒಬ್ಬರ ಹಿಂದೊಬ್ಬರು ಇಹಲೋಕ ಬಿಟ್ಟು ಪಯಣ ಬೆಳೆಸುತ್ತಲೇ ಇದ್ದಾರೆ. ರಾಮು, ಚಂದ್ರಶೇಖರ್, ರೇಣುಕಾ ಶರ್ಮಾ, ಡಿಸೈನರ್ ಮಸ್ತಾನ್ ಸೇರಿದಂತೆ ಸಿನಿಮಾ ಕ್ಷೇತ್ರಕ್ಕೆ ಸೇರಿದವನ್ನ ಕೊರೊನಾ ಸಾಯಿಸುತ್ತಲೇ ಇದೆ. ಈಗ ಶಂಖನಾದ ಅರವಿಂದ್.. ಇನ್ನೂ ಎಷ್ಟು ಮಂದಿಯನ್ನ ಈ ಕೊರೊನಾ ಬಲಿ ಪಡೆಯುತ್ತೋ ಅನ್ನೋ ಆತಂಕ ಶುರುವಾಗಿದೆ.
ಶಂಖನಾದ ಅರವಿಂದ್ ಕೆಲವು ತಿಂಗಳಿಂದ ಅವರು ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಸುಮಾರು 250 ಸಿನಿಮಾಗಳಲ್ಲಿ ನಟಿಸಿದ್ದರೂ ಆರ್ಥಿಕ ಪರಿಸ್ಥಿತಿ ಅಷ್ಟೇನು ಉತ್ತಮವಾಗಿರಲಿಲ್ಲ. ಆದ್ರೂ ಎಲ್ಲೂ ಓಪನ್ ಆಗಿ ತಮ್ಮ ಕಷ್ಟದ ಬಗ್ಗೆ ಹೇಳಿಕೊಂಡವರಲ್ಲ. ಆದ್ರೆ, ಕೊರೊನಾ ಎಂಟ್ರಿ ಕೊಟ್ಟು ಲಾಕ್ಡೌನ್ ಆದಾಗ, ಜೀವನ ಕಷ್ಟ ಆಗುತ್ತಿದೆ ಎಂದು ಹೇಳಿದ್ದರು.
ಎರಡನೇ ಅಲೆ ಆರಂಭ ಆಗುತ್ತಿದ್ದಂತೆ ಅರವಿಂದ್ಗೆ ಕೊರೊನಾ ಸೋಂಕು ತಗುಲಿತ್ತು. ಸುಮಾರು 13 ದಿನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಕಿತ್ಸೆ ಪಡೆಯುತ್ತಿದ್ರು. ಚಿಕಿತ್ಸೆ ಫಲಕಾರಿಯಾಗದ ಗಂಭೀರ ಸ್ಥಿತಿಯಲ್ಲಿದ್ದ ಅರವಿಂದ್ ಮೇ 7 ರಂದು ಕೊನೆಯುಸಿರೆಳೆದಿದ್ದಾರೆ.
ಶಂಖನಾದ ಸಿನಿಮಾದಲ್ಲಿ ಹೀರೋ ಆಗಿ ನಟಿಸಿ ರಾಷ್ಟ್ರಪ್ರಶಸ್ತಿ ಗಿಟ್ಟಿಸಿಕೊಂಡಿದ್ದ ಅರವಿಂದ್ರನ್ನ ಚಿತ್ರರಂಗ ಶಂಖನಾದ ಅರವಿಂದ್ ಅಂತ್ಲೇ ಕರೆಯೋಕೆ ಶುರುಮಾಡಿತ್ತು. ಆದ್ರೆ, ಪುನೀತ್ ರಾಜ್ಕುಮಾರ್ ಬಾಲ ನಟನಾಗಿ ನಟಿಸಿದ್ದ ಬೆಟ್ಟದ ಹೂವು ಅರವಿಂದ್ ಹಾಸ್ಯ ನಟ ಅನ್ನೋ ಇಮೇಜ್ ಅನ್ನ ಇಮ್ಮಡಿಗೊಳಿಸಿತ್ತು.
ಕೆಲವು ತಿಂಗಳ ಹಿಂದಷ್ಟೇ ಪತ್ನಿ ರಮಾ ಅರವಿಂದ್ ಕೂಡ ಸಾವನ್ನಪ್ಪಿದ್ದರು. ಈಗ ಕೊರೊನಾ ಸೋಂಕಿನಿಂದ ಅರವಿಂದ್ ಕೊನೆಯುಸಿರೆಳೆದಿದ್ದಾರೆ. ಸಿನಿಮಾ ಹಾಗೂ ಕಿರುತೆರೆಯಲ್ಲಿ ನಟಿಸುತ್ತಿದ್ದ ನಟ ಇನ್ನೂ ನೆನಪು ಮಾತ್ರ.