25 ದಿನಗಳ ಹಿಂದೆ ದುನಿಯಾ ವಿಜಯ್ ತಂದೆ-ತಾಯಿ ಇಬ್ಬರಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ತಂದೆಗೆ 80 ವರ್ಷ. ತಾಯಿಗೆ 76 ವರ್ಷ. ಹಿರಿಯರಿಗೆ ಕೊರೊನಾ ತಗುಲಿದ್ರೆ, ಮನೆಯವರು ಗಾಬರಿ ಬೀಳೋದು ಸಹಜ. ಆದ್ರೆ, ದುನಿಯಾ ವಿಜಯ್ ಧೃತಿಗೆಡದೆ ತಂದೆ-ತಾಯಿ ಇಬ್ಬರನ್ನು ಮನೆಯಲ್ಲೇ ಇಟ್ಟು ಆರೈಕೆ ಮಾಡಿದ್ದರು. ಅವ್ರಿಗೆ ಕೊರೊನಾ ಗೆದ್ದಿದ್ದು, ಸಂದೇಶ ಸಾರುವ ವಿಡಿಯೋವನ್ನು ವಿಜಯ್ ಹಂಚಿಕೊಂಡಿದ್ದಾರೆ.
ದುನಿಯಾ ವಿಜಯ್ ವಿಡಿಯೋ ಶೇರ್ ಮಾಡುವುದರ ಜೊತೆ ತನ್ನದೇ ಸ್ಥಿತಿಯಲ್ಲಿ ಇರುವವರು ಧೈರ್ಯವನ್ನು ಮಾತ್ರ ಕಳೆದುಕೊಳ್ಳಬೇಡಿ ಎಂದು ಹೇಳಿದ್ದಾರೆ. ಕೊರೊನಾ ಸಂಕಷ್ಟದ ಕಾಲದಲ್ಲಿ ತಂದೆ-ತಾಯಿ ಹೇಳಿದ ಮಾತನ್ನು ಹಂಚಿಕೊಂಡಿದ್ದಾರೆ.
‘‘ಭರವಸೆಯನ್ನು ಮಾತ್ರ ಕಳೆದುಕೊಂಡಿರಲಿಲ್ಲ. ಮೊದಲು ನನ್ನ ತಾಯಿ ಚೇತರಿಸಿಕೊಂಡು ಕೊರೊನಾದಿಂದ ಸಂಪೂರ್ಣವಾಗಿ ಗುಣಮುಖರಾದರು. ನೀನು ಹೆದರಬೇಡ. ಚೇತರಿಸಿಕೊಂಡ ನಂತರ ನನ್ನಮ್ಮ ನನ್ನನ್ನು ಕರೆದು ನಮಗೆ ಯಾರಿಗೂ ಸಿಗದ ಯೋಗ ನಿನಗೆ ಸಿಕ್ಕಿದೆ. ನಿನ್ನನ್ನು ಪ್ರೀತಿಸುವವರು ಇರುವವರೆಗೂ, ಅವರ ಆಶೀರ್ವಾದ, ಆರೈಕೆ ನಿನ್ನನ್ನು ಕಾಯುತ್ತದೆ’ ಎಂದು ಹೇಳಿದರು. ನಿಜವಾಗಲೂ ನಮ್ಮ ತಾಯಿ ಹೇಳಿದಂತೆ ಆಯಿತು. ನಿಮ್ಮಗಳ ಆಶೀರ್ವಾದ ಮತ್ತು ದೈವ ಬಲದಿಂದ ನಮ್ಮ ಮನೆಯಲ್ಲಿ ಚಮತ್ಕಾರ ನಡೆಯಿತು. ನಮ್ಮ ತಂದೆ ದಿನದಿಂದ ದಿನಕ್ಕೆ ಚೇತರಿಸಿಕೊಳ್ಳುತ್ತಾ ಬಂದರು. ನಾನು ನಿಮ್ಮೆಲ್ಲರ ಬಳಿ ಕೇಳಿಕೊಳ್ಳುವುದಿಷ್ಟೆ. ಕೊರೊನಾ ಬಂತು ಎಂದು ಧೃತಿಗೆಡಬೇಡಿ. ತಂದೆ-ತಾಯಿಯರನ್ನು ಕೈಬಿಡಬೇಡಿ. ನನ್ನ ತಂದೆ-ತಾಯಿ ಬದುಕಿದ್ದಾರೆ ಎಂಬ ಖುಷಿಯಿಂದ ಈ ಘಟನೆಯನ್ನು ಹಂಚಿಕೊಳ್ಳುತ್ತಿಲ್ಲ. ಎಷ್ಟೋ ಜನ ನನ್ನ ರೀತಿ ಸೇವೆ ಮಾಡಿ ತಂದೆತಾಯಿಯನ್ನು ಕಳೆದುಕೊಂಡವರಿದ್ದಾರೆ. ಅವರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಆದರೆ ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ. ಸಕಾರಾತ್ಮಕವಾಗಿ ಯೋಚಿಸಿ ಈ ಕೊರೊನಾ ವಿರುದ್ಧ ಗೆಲ್ಲೋಣ. ಜತೆಗೆ ನನ್ನ ಜೀವನದಲ್ಲಿ ನಡೆದ ಈ ಘಟನೆ ಕೆಲವರಿಗೆ ಸ್ಪೂರ್ತಿಯಾಗುತ್ತದೆ ಎಂಬ ಕಾರಣಕ್ಕೆ ಇದನ್ನು ಹಂಚಿಕೊಂಡಿದ್ದೇನೆ. ಏನಾದರೂ ತಪ್ಪಾಗಿದ್ದರೆ ಕ್ಷಮೆಯಿರಲಿ’’
-ಇಂತಿ ನಿಮ್ಮ ವಿಜಯ್ .