ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ಸಿನಿಮಾದ ಟೈಟಲ್ ಘೋಷಣೆಯಾಗಿದೆ. ಕಳೆದೆರಡು ದಿನಗಳಿಂದ ದರ್ಶನ್ 55ನೇ ಚಿತ್ರದ ಟೈಟಲ್ ಅನೌನ್ಸ್ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಕೊನೆಗೂ ಗಣೇಶ ಚತುರ್ಥಿಗೆ ಡಿ ಬಾಸ್ ಸಿನಿಮಾದ ಟೈಟಲ್ ಘೋಷಣೆಯಾಗಿದೆ. ಈಗಾಗ್ಲೇ ಕ್ರಾಂತಿ ಪೋಸ್ಟರ್ ರಿಲೀಸ್ ಆಗಿದ್ದು, ಏನೇನು ವಿಶೇಷತೆಗಳಿದೆ? ಅನ್ನೋದನ್ನು ನೋಡೋಣ.
ಹರಿಕೃಷ್ಣ ನಿರ್ದೇಶಿಸ್ತಿರೋ ದರ್ಶನ್ ಸಿನಿಮಾಗೆ ಕ್ರಾಂತಿ ಟೈಟಲ್ ಫಿಕ್ಸ್ ಮಾಡಲಾಗಿದೆ. ಆದರೆ, ಇದೇ ಟೈಟಲ್ ಯಾಕೆ? ಪೋಸ್ಟರ್ನಲ್ಲಿ ಏನೇನಿದೆ ಅನ್ನುವ ಕುತೂಹಲ ಕೆರಳಿಸುತ್ತದೆ. ಟೈಟಲ್ನಿಂದಲೇ ಪಕ್ಕಾ ಮಾಸ್ ಸಿನಿಮಾ ಅನ್ನೋದನ್ನು ಊಹಿಸಿಕೊಳ್ಳಬಹುದು. ಶೀರ್ಷಿಕೆಯಲ್ಲೇ ಕ್ರಾಂತಿ ಇರೋದ್ರಿಂದ ನಾಯಕನ ಪಾತ್ರ ರೆಬೆಲ್ ಆಗಿರುತ್ತೆ ಅನ್ನೋದನ್ನೂ ಗೆಸ್ ಮಾಡ್ಬಹುದು. ಪೋಸ್ಟರ್ ಬ್ಯಾಕ್ಗ್ರೌಂಡ್ ನೋಡ್ತಿದ್ರೆ, ನಗರದಲ್ಲಿ ನಡೆಯೋ ಕಥೆ ಅನ್ನೋದು ಮೇಲ್ನೋಟಕ್ಕೆ ತಿಳಿಯುತ್ತಿದೆ.
ಹರಿಕೃಷ್ಣ ಇದೇ ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದಾರೆ. ಶೈಲಜಾ ನಾಗ್ ಹಾಗೂ ಬಿ ಸುರೇಶ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ದರ್ಶನ್ಗಾಗಿ ಯಜಮಾನ ಸಿನಿಮಾವನ್ನು ನಿರ್ಮಿಸಿದ್ದರು. ಬಾಕ್ಸಾಫೀಸ್ನಲ್ಲಿ ಯಜಮಾನ 60 ಕೋಟಿಗೂ ಅಧಿಕ ಹಣವನ್ನು ಗಳಿಸಿತ್ತು. ಈಗ ಅದೇ ಜೋಡಿ ಮತ್ತೊಂದು ಸಿನಿಮಾಗೆ ಕೈ ಹಾಕಿದೆ. ಈ ಬಾರಿ ಪ್ಯಾನ್ ಇಂಡಿಯಾ ಸಿನಿಮಾಗೆ ಕೈ ಹಾಕಿದ್ದು, ಕನ್ನಡ, ತೆಲುಗು, ತೆಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ರಾಬರ್ಟ್ ಸಿನಿಮಾ ಗೆದ್ದ ಬಳಿಕ ದರ್ಶನ್ ಸಾಕಷ್ಟು ಸಮಯ ತೆಗೆದುಕೊಂಡು ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅಕ್ಟೋಬರ್ನಿಂದ ಸಿನಿಮಾ ಆರಂಭ ಆಗಲಿದೆ. ಸದ್ಯ ಕ್ರಾಂತಿ ಪೋಸ್ಟರ್ ಇಂಟರ್ನೆಟ್ನಲ್ಲಿ ಮೆಚ್ಚುಗೆ ಗಳಿಸುತ್ತಿದ್ದು, ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ಡಬಲ್ ಖುಷಿ ಕೊಟ್ಟಿದೆ.