ಒಂದು ಕಡೆ ನಟಿ ಕಂಗನಾ ರಾನೌತ್ ಗೆ ಮಣಿಕರ್ಣಿಕಾ ಚಿತ್ರದ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ದೊರೆತಿದೆ. ಮತ್ತೊಂದೆಡೆ ಕಂಗನಾ ಹುಟ್ಟುಹಬ್ಬದ ದಿನವೇ ಆಕೆಯ ಬಹುನಿರೀಕ್ಷಿತ ‘ತಲೈವಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದೆ. ಇದೆಲ್ಲದರ ನಡುವೆ ವೇದಿಕೆ ಮೇಲೆ ನಟಿ ಕಂಗನಾ ಭಾವನೆಗಳ ಪ್ರವಾಹದಲ್ಲಿ ಕೊಚ್ಚಿ ಹೋಗಿ ಕಣ್ಣೀರು ಹಾಕಿದ್ದಾರೆ.
ಹೆಚ್ಚಾಗಿ ನನ್ನನ್ನು ಸಿನಿಮಾಗಳಿಂದ ಕೈಬಿಡಲಾಗುತ್ತದೆ. ಆದರೆ ಒಂದು ಸಿನಿಮಾಗೆ ನಾನೇ ಬೇಕು ಎಂದು ಹಠ ಹಿಡಿದು ಆ ಪಾತ್ರವನ್ನು ಮಾಡಿಸಿದ ಪ್ರಕರಣಗಳು ಬಹಳ ಕಡಿಮೆ. ತಲೈವಿ ನಿರ್ದೇಶಕ ಅಂಥಾ ಕೆಲಸ ಮಾಡಿದ ಅಪರೂಪದ ವ್ಯಕ್ತಿ. ನಾನು ಅವರಿಗೆ ಎಷ್ಟು ಆಭಾರಿಯಾಗಿದ್ದಾರೂ ಸಾಲದು ಎಂದು ಮಾತನಾಡಿದ್ದಾರೆ ಕಂಗನಾ.
ಕಂಗನಾ ಭಾವುಕರಾಗಿದ್ದು ಚೆನ್ನೈನಲ್ಲಿ ತಲೈವಿ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಜೀವನಾಧಾರಿತ ಚಿತ್ರ ತಲೈವಿಯ ಟ್ರೇಲರ್ ಬಿಡುಗಡೆಯಾಗಿದೆ. ಈ ಟ್ರೇಲರ್ ಅದೆಷ್ಟು ಸದ್ದು ಮಾಡಿದೆ ಅಂದ್ರೆ ಮುಂದಿನ ವರ್ಷದ ರಾಷ್ಟ್ರಪ್ರಶಸ್ತಿ ಕೂಡಾ ಕಂಗನಾಗೇ ಬರೋದು ಖಂಡಿತಾ..ಅದೂ ತಲೈವಿ ಚಿತ್ರಕ್ಕಾಗಿ ಎನ್ನುತ್ತಿದ್ದಾರೆ ಜನ.
ಕಂಗನಾ ಈ ಪಾತ್ರದಲ್ಲಿ ಅದೆಷ್ಟು ಬೆರೆತು ಹೋಗಿದ್ದಾರೆ ಅಂದ್ರೆ ಜಯಲಲಿತಾ ಬದುಕಿನ ವಿವಿಧ ಘಟ್ಟಗಳಲ್ಲಿ ತಾವೂ ಜಯಲಲಿತಾ ಆಗಿಹೋಗಿದ್ದಾರೆ. ನೋಡುತ್ತಿರೋ ವೀಕ್ಷಕರಿಗೆ ಒಂದು ಕ್ಷಣವೂ ತೆರೆ ಮೇಲೆ ಕಂಗನಾ ಕಾಣೋದಿಲ್ಲ, ಅಲ್ಲಿ ಕಾಣೋದೆಲ್ಲಾ ಜಯಲಲಿತಾರೇ. ಟ್ರೇಲರ್ ಯಶಸ್ಸು ಚಿತ್ರದ ಭವಿಷ್ಯಕ್ಕೆ ಕನ್ನಡಿ ಹಿಡಿಯುತ್ತಿದೆ. ಕಂಗನಾ ಇದೇ ಯಶಸ್ಸಿನ ಖುಷಿಯ ಆನಂದಭಾಷ್ಪಗಳನ್ನು ವೇದಿಕೆ ಮೇಲೆ ಸುರಿಸಿದ್ದಾರೆ.