ಕಳೆದ ನಾಲ್ಕೈದು ದಿನಗಳಿಂದ ದರ್ಶನ್, ಉಮಾಪತಿ ಹಾಗೂ ಇಂದ್ರಜಿತ್ ಲಂಕೇಶ್ ಕಿತ್ತಾಟ ತಾರಕಕ್ಕೇರುತ್ತಲೇ ಇದೆ. ಪ್ರತಿಯೊಬ್ಬರೂ ಏಟಿಗೆ ಎದಿರೇಟು. ಉತ್ತರಕ್ಕೆ ಪ್ರತ್ಯುತ್ತರ ನೀಡುತ್ತಲೇ ಇದ್ದಾರೆ. ದರ್ಶನ್ ಹೆಸರಿನಲ್ಲಿ ₹25 ಕೋಟಿ ನಕಲಿ ಸಾಲದಿಂದ ಶುರುವಾಗಿದ್ದು, ಈಗ ಅಣ್ಣಾವ್ರ ಕುಟುಂಬದ ಆಸ್ತಿವರೆಗೂ ಬಂದು ನಿಂತಿದೆ. ಅಕ್ಷರಶ: ಬೀದಿಯಲ್ಲಿ ನಿಂತು ಕಿತ್ತಾಡಿಕೊಳ್ತಿದ್ದು, ಜಗ್ಗೇಶ್ ಬುದ್ದಿವಾದ ಮಾತುಗಳನ್ನು ಹೇಳಿದ್ದಾರೆ. ಫೇಸ್ ಬುಕ್ನಲ್ಲಿ ಸುದೀರ್ಘ ಪತ್ರ ಬರೆದಿರೋ ನವರಸ ನಾಯಕ, ಚಿತ್ರರಂಗದಲ್ಲಿ ತನ್ನ ಆರಂಭದ ದಿನಗಳನ್ನು ನೆನೆದಿದ್ದಾರೆ. ಅಲ್ಲದೆ ದರ್ಶನ್ಗೆ ಪ್ರರೋಕ್ಷವಾಗಿ ಹಿತನುಡಿಗಳನ್ನು ಹೇಳಿದ್ದಾರೆ.
‘‘ತುಮಕೂರು ಜಿಲ್ಲೆಯ, ತುರುವೇಕೆರೆ ತಾಲ್ಲೂಕಿನ, ಮಾಯಸಂದ್ರ ಹೋಬಳಿಯ,ಆನಡುಗು ಎಂಬ ಸಣ್ಣ ಗ್ರಾಮದ, ಸಣ್ಣ ಕುಟುಂಬದ, ಹಳ್ಳಿಹುಡುಗ ನಾನು ಈಶ್ವರ್ ಗೌಡ @ಜಗ್ಗೇಶ..! ನನಗೆ ಇದ್ದ ಆಸೆ ರಾಜಕುಮಾರ್ ಕಂಡು ಮಾತಾಡಿಸಿ ಆಶೀರ್ವಾದ ಪಡೆದು ಸಿನಿಮಾ ನಟನಾಗಬೇಕು ಎಂಬುದು ಒಂದೆ ಗುರಿ!1980ಕ್ಕೆ ಆ ಕಾರ್ಯ ಶುರು,ಆಗ ಹೇಗಿದ್ದೆ ನಾನು ದಾಖಲಿಸಿರುವೆ ಚಿತ್ರಗಳಲ್ಲಿ ಮತ್ತೊಮ್ಮೆ ಮುಖ ನೋಡಿ ನಕ್ಕುಬಿಡಿ!ಆ ಮುಖಕ್ಕೆ ಆಕಾಲಕ್ಕೆ ಸಿನಿಮನಟ ಆಗುವ ಕನಸ್ಸು?ಈಗಿನ ಜಗ್ಗೇಶನ ಮರೆತು ಯೋಚಿಸಿ ಇದು ಸಾಧ್ಯವಾ? ಆಗ ಅಪ್ಪಅಮ್ಮ ಬಂಧು ಮಿತ್ರರು ಹೇಳಿದ್ದು, ಉಗಿದದ್ದು ಹೀಗೆ ಮುಚ್ಕೊಂಡು ಅನ್ನ ಹುಡ್ಕೋ ಕ್ಯಾಮೆ ನೋಡು!ಶಿವಲಿಂಗಪ್ಪನ ಮರ್ಯಾದೆ ಉಳಿಸು ಮಂಗಮುಂಡೆದೆ ಎಂದು! ಗುರುಹಿಂದೆ ಗುರಿಮಂದೆ ಹಠ ಬಿಡಲಿಲ್ಲಾ ಗಾಂಧಿನಗರ ಅಲೆದು ಚಪ್ಪಲಿಸವೆಸಿ ದಡಮುಟ್ಟಿದೆ ಎಂದುಬಿಟ್ಟರೆ ಆತ್ಮ ಧ್ರೋಹ ಆಗಿಬಿಡುತ್ತದೆ ಕಾರಣ ದಡಮುಟ್ಟಿಸಿದ್ದು ಅಂದಿನ ನಿರ್ದೇಶಕರು ನಿರ್ಮಾಪಕರು ಮಾಧ್ಯಮಮಿತ್ರರು ಹಾಗೂ ವಿಶೇಷವಾಗಿ ಸ್ವಾಭಿಮಾನಿ ಕನ್ನಡಿಗರು.’’ ಎಂದು ಬರೆದುಕೊಂಡಿದ್ದಾರೆ.
ಇಂದಿನ ಸಾರ್ವಜನಿಕ ಜೀವನ public toilet ನಂತೆ ಆಗಿಬಿಟ್ಟಿದೆ! ಆದರೂ ವಿಧಿಯಿಲ್ಲಾ ಚರ್ಮ ದಪ್ಪಮಾಡಿ ಬದುಕಬೇಕಾಗಿದೆ. ಬಣ್ಣದ ಬದುಕು ನಶ್ವರ. ದಿನ ದೇವರು ಬೀದಿಗೆ ಬಂದರೆ ಮೌಲ್ಯ ಇರೋದಿಲ್ಲ ಅಂತ ಪರೋಕ್ಷವಾಗಿ ದರ್ಶನ್ಗೆ ಸಲಹೆ ನೀಡಿದ್ದಾರೆ.
‘‘ಈಗ ವಿಷಯಕ್ಕೆ ಬರುವೆ ಈ ಅಕ್ಷರ ಠಂಕಿಸಿದ್ದಕ್ಕೆ.. ಉಧ್ಯಮದ ಕಲಾಬಂಧುಗಳಿಗೆ ನನ್ನ ಸಣ್ಣ ಅನುಭವದ ನುಡಿ!. ಮಾನ್ಯರೇ ನಶ್ವರ ಬಣ್ಣದ ಬದುಕು!ಕಲಾವಿಧನ ಜೀವನ ನಡೆಯುವವರೆಗೆ ನಾಣ್ಯ ಮಿಕ್ಕಂತೆ ಸವಕಲು! ಎಲ್ಲಿಯವರೆಗೂ ಕಲಾವಿದ ವರ್ಷಕ್ಕೆ ಮಾತ್ರ ಹೊರಬರುವ ಊರ ಮೆರೆದೇವರಂತೆ ಹೊರ ಬರಬೇಕು. ಆಗ ದೇವರಪರ ಅದ್ಭುತ ಅನನ್ಯ. ದಿನ ಆ ದೇವರು ಬೀದಿಗೆ ಬಂದರೆ ಮೌಲ್ಯ ಇರುವುದಿಲ್ಲಾ. ರಾಜನಾಗಲಿ ಸೇವಕನಾಗಲಿ ಜಗಳ ಘರ್ಷಣೆ ಸಹಜ. ಆ ಘರ್ಷಣೆ ನಿಭಾಯಿಸುವ ಕಲೆ ಕರಗತ ಆಗಿರಬೇಕು. ಆಗ ಕಾಡ್ಗಿಚ್ಚನ್ನು ತಣ್ಣಗೆ ಮಾಡಬಹುದು. ಹಾಗೆ ಅನ್ಯತ ಭಾವಿಸದೆ ನನ್ನ ಮಾತು ಆಲಿಸಬೇಕು ಕಲಾಬಂಧುಗಳು. ಆತ್ಮೀಯ ಮಾಧ್ಯಮಮಿತ್ರರು ಕಲಾರಂಗದ ನಮ್ಮಕಾಯಕ ಜನರಿಗೆ ತಲುಪಿಸೋ ನಾವಿಕರು, ನಾವು ನೀವು ದೇಹದ ಎರಡು ಕಣ್ಣಂತೆ ಯಾವುದಕ್ಕೂ ನೋವಾದರು ನಮಗೆ ನಷ್ಟ. ದಯಮಾಡಿ ವಿಶೇಷ ಹೃದಯ ನಿಮ್ಮದಾಗಿ ನಮ್ಮ ಚಿತ್ರರಂಗ ಬೀದಿಚರ್ಚೆಗೆ ವಿಷಯವಾಗದಿರಲಿ.’’ ಎಂದು ವಿನಂತಿಸಿಕೊಂಡಿದ್ದಾರೆ.