ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕಂಗನಾ ರಾನೌತ್ ನಿಜವಾಗಲೂ ‘ಕ್ವೀನ್’ ಎಂದು ಸಾಬೀತು ಪಡಿಸಿದ್ದಾರೆ. ಈಗಾಗಲೇ ಕಂಗನಾ ನಟನೆಯ ತಲೈವಿ ಚಿತ್ರದ ಟ್ರೇಲರ್ ಎಲ್ಲೆಡೆ ಭಾರೀ ಸದ್ದು ಮಾಡ್ತಿದೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಜೀವನಾಧಾರಿತ ಚಿತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ. ಎಷ್ಟರಮಟ್ಟಿಗೆ ಅಂದ್ರೆ ಮುಂದಿನ ವರ್ಷದ ರಾಷ್ಟ್ರಪ್ರಶಸ್ತಿಯೂ ಕಂಗನಾಗೇ ಬರೋದು ಖಂಡಿತಾ ಎನಿಸುವಷ್ಟರಮಟ್ಟಿಗೆ ಕಂಗನಾ ಹವಾ ಎದ್ದಿದೆ. ಆದ್ರೆ ಇದರ ನಡುವೆಯೇ ತನ್ನ ಬದುಕಿನ ಕೆಲ ಪುಟಗಳ ಬಗ್ಗೆ ತಿಳಿಸಿದ್ದಾರೆ ಕಂಗನಾ.


ಟ್ವಿಟರ್ ನಲ್ಲಿ ಚಿತ್ರನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕಂಗನಾರನ್ನು ಹೊಗಳಿ ಟ್ವೀಟ್ ಮಾಡಿದ್ದಾರೆ. ಕೋವಿಡ್ ನಂಥಾ ಕಷ್ಟದ ಸಂದರ್ಭದಲ್ಲಿ ಕೂಡಾ ಛಲಬಿಡದೆ ಅತ್ಯುತ್ತಮ ಕೆಲಸ ಮಾಡಿದ್ದಾರೆ ಕಂಗನಾ. ಒಂದು ಕಡೆ ತಲೈವಿ ಚಿತ್ರ, ಅಲ್ಲಿಂದ ನೇರವಾಗಿ ಏರ್ ಫೋರ್ಸ್ ನ ಆಕ್ಷನ್ ಸಿನಿಮಾ ‘ತೇಜಸ್’. ವಿವಿಧ ರೂಪಗಳ ಸಿನಿಮಾಗಳನ್ನು ಒಂದರ ಹಿಂದೆ ಒಂದರಂತೆ ಮಾಡುತ್ತಲೇ ಇದ್ದಾರೆ ಆಕೆ. ಹೊಸರಬರು ಆಕೆಯಿಂದ ಕಲಿಯಬೇಕಾದ್ದು ಬಹಳ ಇದೆ ಎಂದು ಟ್ವೀಟಿಸಿದ್ದಾರೆ.
ಇದಕ್ಕೆ ಉತ್ತರಿಸಿರುವ ಕಂಗನಾ ತಾನು ಒಂದು ಕಾಲದಲ್ಲಿ ಬೇಡವಾದ ಮಗಳಾಗಿದ್ದೆ ಎಂದು ತನ್ನ ಬದುಕಿನ ಕರಾಳ ಪುಟವನ್ನು ತೆರೆದಿಟ್ಟಿದ್ದಾರೆ. ಒಂದು ಕಾಲದಲ್ಲಿ ಬೇಡವಾಗಿದ್ದ ಹೆಣ್ಣುಮಗುವಾಗಿದ್ದೆ, ಆದರೆ ಈಗ ಅತ್ಯುತ್ತಮ ಚಿತ್ರ ತಯಾರಕರು, ತಂತ್ರಜ್ಞರ ಜೊತೆ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿದೆ. 50 ಡಿಗ್ರಿಯ ತಾಪಮಾನದಲ್ಲಿ ಆಕ್ಷನ್ ಸೀಕ್ವೆನ್ಸ್ ಶೂಟಿಂಗ್ ಮಾಡುವಾಗ ಸುಟ್ಟೇ ಹೋಗುತ್ತೀನಿ ಎನಿಸುತ್ತದೆ. ಆದ್ರೆ ಕೊನೆಗೆ ಇದೇ ಬೆಂಕಿಯಲ್ಲಿ ಎಲ್ಲರೂ ಬೇಯಬೇಕಲ್ಲಾ ಎನಿಸಿ ಮುನ್ನುಗ್ಗುತ್ತೇನೆ. ಅನೇಕ ಅತ್ಯುತ್ತಮ ಸಿನಿಮಾಗಳಲ್ಲಿ ಆ ಪಾತ್ರವನ್ನು ನೀನೇ ಮಾಡಬೇಕು ಎಂದು ತಯಾರಕರು ಹೇಳಿದಾಗ ನನ್ನ ಅವಶ್ಯಕತೆ ಈ ಜಗತ್ತಿಗೆ ಇದೆ ಎನಿಸಿ ಖುಷಿಯಾಗುತ್ತದೆ ಎಂದಿದ್ದಾರೆ ಕಂಗನಾ.