ಪುನೀತ್ ರಾಜ್ಕುಮಾರ್ ನಟನೆಯ ‘ಯುವರತ್ನ’ ಸಿನಿಮಾ ಏಪ್ರಿಲ್ 1 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹೀಗಾಗಿ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಅಪ್ಪು ಖುದ್ದಾಗಿ ಭೇಟಿ ಕೊಟ್ಟು ಪ್ರಚಾರ ಮಾಡಿದ್ದರು. ಕಲಬುರ್ಗಿ, ಬೆಳಗಾವಿ, ಹುಬ್ಬಳ್ಳಿ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರಿಗೆ ತೆರಳಿ ಭರ್ಜರಿ ಪ್ರಚಾರ ಮಾಡಿದ್ರು. ಯುವರತ್ನ ತಂಡ ಹೋದ ಕಡೆಗಳಲ್ಲೆಲ್ಲಾ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಈ ವೇಳೆ ಕೊರೊನಾ ನಿಯಮ ಉಲ್ಲಂಘನೆ ಆಗಿದ್ದು, ಈ ಬಗ್ಗೆ ಅಸಮಾಧಾನ ವ್ಯಕ್ತವಾಗಿತ್ತು.
ಯುವರತ್ನ ಪ್ರಚಾರಕ್ಕೆ ವಿರೋಧವಾದ ಬೆನ್ನಲ್ಲೇ ಕೊರೊನಾ ನಿಯಮ ಉಲ್ಲಂಘನೆಯಾಗಿಯೆಂದು ಹೈಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿತ್ತು. ಹೀಗಾಗಿ ಕೊರೊನಾ ನಿಯಮ ಉಲ್ಲಂಘನೆ ವಿರುದ್ಧ ಕೈಗೊಂಡ ಕ್ರಮಗಳನ್ನ ಬಗ್ಗೆ ವರದಿ ನೀಡುವಂತೆ ಹೈಕೋರ್ಟ್ ಸರ್ಕಾರಕ್ಕೆ ತಾಕೀತು ಮಾಡಿದೆ. ಸಿನಿಮಾ ಪ್ರಚಾರದ ವೇಳೆ ಕೊರೊನಾ ನಿಯಮ ಸ್ಪಷ್ಟವಾಗಿ ಉಲ್ಲಂಘನೆಯಾಗುತ್ತಿದ್ದು, ಇದ್ರಿಂದ ಕೊರೊನಾ ವೇಗವಾಗಿ ಹಬ್ಬುವ ಸಾಧ್ಯತೆಯಿದೆ.
ಕೆಲವು ದಿನಗಳ ಹಿಂದಷ್ಟೇ ಸಿನಿಮಾ ಪ್ರಚಾರ ವೇಳೆ ಕೊರೊನಾ ನಿಯಮ ಉಲ್ಲಂಘನೆಯಾಗುತ್ತಿದೆಯೆಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಸಾವಿರಕ್ಕೂ ಅಧಿಕ ಮಂದಿ ಸಿನಿಮಾ ಪ್ರಚಾರದ ವೇಳೆ ಸೇರುತ್ತಿದ್ದಾರೆ. ಕೊರೊನಾ ಹೆಚ್ಚಾಗುತ್ತಿರುವ ದಿನಗಳಲ್ಲಿ ನಿಯಂತ್ರಣಕ್ಕೆ ತರಲು ಸಿನಿಮಾ ಮಂದಿಯ ಪಾತ್ರ ಕೂಡ ದೊಡ್ಡದಿದೆ. ಹೀಗಾಗಿ ತಾರೆಯರೂ ಮಾಸ್ಕ್ ಧರಿಸಿಬೇಕು. ಅಭಿಮಾನಿಗಳಿಗೂ ಹೇಳಬೇಕು. ಜೊತೆಗೆ ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದರು.