‘ಹೀರೋ’ ಟ್ರೈಲರ್ ನೋಡಿದಾಲ್ಲೇ ಕೆಲವರು ಸಿನಿಮಾ ನೋಡ್ಲೇಬೇಕು ಅಂತ ಫಿಕ್ಸ್ ಆಗ್ಬಿಟ್ಟಿದ್ರು. ಕೊನೆಗೂ ತೆರೆಮೇಲೆ ರಿಷಬ್ ಶೆಟ್ಟಿ ಹೀರೋಯಿಸಂ ಶುರುವಾಗಿದೆ. ನಿರೀಕ್ಷೆಗೆ ತಕ್ಕಂತೆ ಪ್ರೇಕ್ಷಕರನ್ನ ರಂಜಿಸುವಲ್ಲಿ ರಿಷಬ್ ಶೆಟ್ಟಿ ಗೆದ್ದಿದ್ದಾರೆ. ಬಾಟಲ್ ಜೊತೆಗೆ ಲೇಸರ್ ಹಿಡಿದು ಬಂದು ಹೀರೋಯಿಸಂ ತೋರಿಸಿದ್ದಾರೆ. ಹೀರೋಆಗಿ ನಿರ್ಮಾಪಕರಾಗಿ ರಿಷಬ್ ಗೆದ್ರಾ ಸೋತ್ರಾ ಅನ್ನೋದನ್ನ ಮುಂದೆ ನೋಡೋಣ ಬನ್ನಿ.
ಕಥೆ ಏನು ಅನ್ನೋದನ್ನ ಕಂಪ್ಲೀಟ್ ಆಗಿ ಹೇಳಿಬಿಟ್ರೆ, ಸಿನಿಮಾ ನೋಡುವ ಮಜಾ ಹೋಗಿ ಬಿಡುತ್ತೆ. ಟ್ರೈಲರ್ನಲ್ಲೇ ಚಿತ್ರದ ಒನ್ ಲೈನ್ ಸ್ಟೋರಿ ರಿವೀಲ್ ಆಗಿತ್ತು. ಹೀರೋಯಿನ್ಗೆ ಹೀರೋ ಜೊತೆ ಮೊದಲೇ ಲವ್ವಾಗಿರುತ್ತೆ. ಆದರೆ ಶ್ರೀಮಂತನ ಜೊತೆಯಲ್ಲಿ ಮದುವೆ ಆಗೋಗಿರುತ್ತೆ. ಮತ್ತೆ ಅವಳನ್ನ ಹುಡುಕಿಕೊಂಡು ಹೀರೋ ಆಕೆಯ ಗಂಡನ ಮನೆಗೆ ಬರ್ತಾನೆ. ಆಕೆಯನ್ನ ಹೊತ್ಕೊಂಡ್ ಹೋಗ್ತಾನೆ. ಕಥೆ ಇಷ್ಟೆ. ಆದ್ರೆ ಸಿಂಪಲ್ ಕಥೆಗೆ ಭರತ್ ರಾಜ್ ಟ್ರೀಟ್ಮೆಂಟ್ ಅದ್ಭುತವಾಗಿದೆ. ಕುಕ್ಕುರ್ ವಿಶಲ್ ಇಡೀ ಚಿತ್ರಕ್ಕೆ ದೊಡ್ಡ ತಿರುವು ಕೊಡೋದೇ ಇಂಟ್ರೆಸ್ಟಿಂಗ್. ಒಟ್ನಲ್ಲಿ ಪ್ರೇಕ್ಷಕರಿಗೆ ಎಲ್ಲೂ ಬೋರ್ ಹೊಡೆಸದೇ ಎರಡೂ ಕಾಲು ಗಂಟೆ ಚಿತ್ರವನ್ನ ನೋಡಿಸಿಕೊಂಡು ಹೋಗಿರುವ ಪರಿ ಮೆಚ್ಚುವಂಥದ್ದು. ಇಲ್ಲೇ ರಿಷಬ್ ಶೆಟ್ಟಿ ಅಂಡ್ ಟೀಂ ಗೆದ್ದಿರೋದು.
ಕಾಡಿನ ನಡುವೆಅಶೋಕವನ ಎಸ್ಟೇಟ್. ಊರಿನ ಸಂಪರ್ಕವೇ ಇಲ್ಲದ ಒಂಟಿಮನೆ. ಎಲ್ಲರೂ ಮನೆಯಲ್ಲಿ ನಾಯಿ ಸಾಕಿಕೊಂಡಂತೆ ಮೊಸಳೆ ಸಾಕಿಕೊಂಡಿರೋ ನರ ರಾಕ್ಷಸ ಯಜಮಾನ. ಆ ಮನೆಯನ್ನ ಕಾಯುವ ರಾಕ್ಷಸರ ಪಡೆ. ಯಜಮಾನನ್ನ ಮದುವೆಯಾಗಿರೋ ನಾಯಕಿ. ಕೈಕೊಟ್ಟ ನಾಯಕಿಯನ್ನ ಸಾಯಿಸೋಕೆ ಬಂದು ಪೇಚಿಗೆ ಸಿಲುಕುವ ನಾಯಕ. ದಿನಾ ಕಣ್ಣೀರಲ್ಲೇ ಕೈತೊಳೆಯುವ ನಾಯಕಿ ನೋವಿನ ಕೂಪದಿಂದ ಹೊರಬರೋಕೆ ಹೇಗೆ ಹೊರಬರ್ತಾಳೆ ಅನ್ನೋದನ್ನ ತೆರೆಮೇಲೆ ನೋಡ್ಬೇಕು.
ಡಾರ್ಕ್ ಕಾಮಿಡಿ ಸಿನಿಮಾಗಳು ಸ್ಯಾಂಡಲ್ವುಡ್ನಲ್ಲಿ ಬಹಳ ಕಮ್ಮಿ. ಈ ದಿಶೆಯಲ್ಲಿ ಭರತ್ ರಾಜ್ ಟ್ಯಾಲೆಂಟ್ನ ಮೆಚ್ಚಿಕೊಳ್ಳಲೇಬೇಕು. ಒಂದು ಕೊಲೆಯ ಸುತ್ತಾ ಇಡೀ ಕಥೆಯನ್ನ ಹೇಳುತ್ತಾ ಹೋಗ್ತಾರೆ. ‘ಬೆಲ್ ಬಾಟಂ’ ನಂತ್ರ ರಿಷಬ್ ಶೆಟ್ಟಿ ಹೀರೋ ಆಗಿ ನಟಿಸಿರೋ ಎರಡನೇ ಸಿನಿಮಾ ಇದು. ಹಾಗಂತ ರಿಷಬ್ ಇಲ್ಲಿ ಮಾಸ್ ಹೀರೋ ಅಲ್ಲ, ತಾವೇ ಪೇಚಿಗೆ ಸಿಲುಕುತ್ತಾ, ಕುಡಿತದ ವೀಕ್ನೆಸ್ಸಿನ ಜೊತೆಗೆ ಹೋರಾಟ ಮಾಡುತ್ತಾ ಪ್ರೇಕ್ಷಕರನ್ನ ರಂಜಿಸ್ತಾರೆ. ನಾಯಕಿ ಗಾನವಿ ಮೊದಲ ಪ್ರಯತ್ನದಲ್ಲೇ ಗಮನ ಸೆಳೆದಿದ್ದಾರೆ. ಇನ್ನು ಪ್ರಮೋದ್ ಶೆಟ್ಟಿ, ಉಗ್ರಂ ಮಂಜು ಕೂಡ ಒಳ್ಳೆ ಅಂಕ ಗಿಟ್ಟಿಸ್ತಾರೆ. ಚಿತ್ರದಲ್ಲಿ ಬರೋ ಅಡುಗೆ ಭಟ್ಟ, ವೆಟರ್ನರಿ ಡಾಕ್ಟರ್ ಹೀಗೆ ಎಲ್ಲಾ ಪಾತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತೆ.
ಕಾಮಿಡಿ, ಕ್ರೌರ್ಯದ ಜೊತೆಗೆ ಥ್ರಿಲ್ ಮಿಕ್ಸ್ ಮಾಡಿ ಹೀರೋ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಇಡೀ ಸಿನಿಮಾ ಒಂದು ತೂಕ ಆದ್ರೆ, ಅಜನೀಶ್ ಲೋಕನಾಥ್ ಸಂಗೀತದ್ದು ಮತ್ತೊಂದು ತೂಕ. ಎರಡು ಕಾಲು ಗಂಟೆ ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳುವುದೇ ಅಜನೀಶ್ ಬಿಜಿಎಂ. ಅರವಿಂದ್ ಕಶ್ಯಪ್ ಸಿನಿಮಾಟೋಗ್ರಫಿಗೂ ಸಕ್ಸಸ್ ಪಾಲು ಸಿಗಬೇಕು. ಒಟ್ನಲ್ಲಿ ಅಭಿನಯದ ಜೊತೆಗೆ ರಿಷಬ್ ನಿರ್ಮಾಪಕರಾಗಿಯೂ ಗೆದ್ದಿದ್ದಾರೆ. ನೀವು ವೀಕೆಂಡ್ ಫ್ರೀ ಇದ್ರೆ ಅಶೋಕ ವನದ ಹೀರೋ ದರ್ಬಾರ್ ನೋಡಿ ಎಂಜಾಯ್ ಮಾಡಿ.