ನಿಖಿಲ್ ಕುಮಾರಸ್ವಾಮಿ ಸಿನಿಮಾ ಹಾಗೂ ರಾಜಕೀಯ ಎರಡರಲ್ಲೂ ಸಕ್ರಿಯರಾಗಿದ್ದಾರೆ. ಸದ್ಯ ರೈಡರ್ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಲಾಕ್ಡೌನ್ ಹಿನ್ನೆಲೆಯಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗಿದೆ. ಈ ಮಧ್ಯೆ ನಿಖಿಲ್ ಕುಮಾರಸ್ವಾಮಿ ಹಾಗೂ ಜಮೀರ್ ಅಹಮದ್ ಬೆಂಬಲಿಗರು ಕಿತ್ತಾಡಿಕೊಂಡಿದ್ದಾರೆ. ಅದೂ ಒಂದು ಗೆಸ್ಟ್ ಹೌಸ್ ವಿಚಾರಕ್ಕಾಗಿ ಎರಡೂ ಕಡೆಯ ಬೆಂಬಲಿಗರ ಮಧ್ಯೆ ಜಟಾಪಟಿ ನಡೆದು ಹೋಗಿದೆ.
ಜೂನ್ 9 ರ ಸಂಜೆ ಜಮೀರ್ ಅಹಮದ್ಗೆ ಸೇರಿರೋ ಗೆಸ್ಟ್ ಹೌಸ್ನಲ್ಲಿ ಹೈಡ್ರಾಮ ನಡೆದಿದೆ. ಗೆಸ್ಟ್ ಹೌಸ್ ತೆರವುಗೊಳಿಸುವ ವಿಚಾರವಾಗಿ ಇಬ್ಬರ ಬೆಂಬಲಿಗರೂ ಕಿತ್ತಾಡಿಕೊಂಡಿದ್ದಾರೆ. ಈ ವಿಚಾರವೀಗ ನಿಖಿಲ್ ಸಿನಿಮಾಗಿಂತಲೂ ಹೆಚ್ಚು ಚರ್ಚೆಗೀಡು ಮಾಡುತ್ತಿದೆ. ಕುಮಾರಸ್ವಾಮಿ ಮೊದಲ ಬಾರಿಗೆ ಸಿನಿಮಾ ಆಗಿದ್ದಾಗ ಜಮೀರ್ ಅಹಮದ್ ನಡುವಿನ ಸಂಬಂಧ ಚೆನ್ನಾಗಿತ್ತು. ಹೀಗಾಗಿ ಸದಾಶಿವನಗರದಲ್ಲಿದ್ದ ತಮ್ಮ ಅತಿಥಿಗೃಹವನ್ನು ಕುಮಾರಸ್ವಾಮಿಗೆ ಕೊಟ್ಟಿದ್ದರು. ಕೆಲವು ವರ್ಷಗಳಿಂದ ಜಮೀರ್ ಹಾಗೂ ಕುಮಾರಸ್ವಾಮಿ ಮಧ್ಯೆ ಸಂಬಂಧ ಹಳಸಿತ್ತು. ಜೊತೆ ಜೆಡಿಎಸ್ ಬಿಟ್ಟು ಕಾಂಗ್ರೆಸ್ಗೆ ಹಾರಿದ್ದರಿಂದ ಮೊದಲಿನ ಬಾಂಧವ್ಯ ಇರಲಿಲ್ಲ. ಆಗ ಕುಮಾರಸ್ವಾಮಿ ಈ ಗೆಸ್ಟ್ ಹೌಸ್ನಿಂದ ದೂರವಿದ್ದರು ಎನ್ನಲಾಗಿದೆ.
ಎಚ್ಡಿಕೆ ಈ ಅತಿಥಿಗೃಹಕ್ಕೆ ಹೋಗುವುದನ್ನು ಬಿಟ್ಟಿದ್ದರೂ, ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಅವರ ಆಪ್ತರು ಆಗಾಗ ಈ ಗೆಸ್ಟ್ ಹೌಸ್ನಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಅಲ್ಲದೆ ಸಿನಿಮಾಗೆ ಸಂಬಂಧಿಸಿದ ಕೆಲವು ಉಪಕರಣಗಳನ್ನು ಇಲ್ಲೇ ಇಟ್ಟಿದ್ದರು ಎನ್ನಲಾಗಿದೆ. ಈ ಮಧ್ಯೆ ಬುಧವಾರ ಜಮೀರ್ ಬೆಂಬಲಿಗರು ಗೆಸ್ಟ್ಹೌಸ್ಗೆ ಪ್ರತ್ಯೇಕ ಬೀಗ ಹಾಕಿದ್ದರು. ಇದ್ರಿಂದ ನಿಖಿಲ್ ಹಾಗೂ ಜಮೀರ್ ಕಡೆವರ ನಡುವೆ ಜಟಾಪಟಿ ಶುರುವಾಗಿದೆ.
ಈ ಮಧ್ಯೆ ಗೆಸ್ಟ್ಹೌಸ್ನಲ್ಲಿದ್ದ ವಸ್ತುಗಳನ್ನು ತೆರವುಗೊಳಿಸಲು ವಿಧಾನ ಪರಿಷತ್ ಸದಸ್ಯ ಬೋಜೆಗೌಡ ಸಮಯಕೇಳಿದ್ದರು ಎನ್ನಲಾಗಿದೆ. ಅಷ್ಟರಲ್ಲೇ ಈ ಗಲಾಟೆ ನಡೆದು ಹೋಗಿದೆ. ಇಷ್ಟೆಲ್ಲಾ ಆದ್ರೂ ಜಮೀರ್ ಅಹಮದ್ ಯಾಕೆ ದೂರು ನೀಡಿಲ್ಲ? ಕುಮಾರಸ್ವಾಮಿ ಮಧ್ಯೆ ಪ್ರವೇಶ ಮಾಡಿ ಪ್ರಕರಣ ತಿಳಿಗೊಳಿಸಿದ್ರಾ? ಇಂತಹ ಪ್ರಶ್ನೆ ಉತ್ತರ ಸಿಗಬೇಕಿದೆ.