ಕೊರೊನಾ ಎರಡನೇ ಅಲೆ ಭಯ ಇನ್ನೂ ಇದೆ. ಹಂತ ಹಂತವಾಗಿ ಲಾಕ್ಡೌನ್ ತೆರವುಗೊಳಿಸುತ್ತಿದ್ರೂ, ಚಿತ್ರಮಂದಿರಗಳು ಓಪನ್ ಆಗಿಲ್ಲ. ಆದ್ರೆ, ಈ ಎಲ್ಲಾ ಆತಂಕಗಳನ್ನು ಪಕ್ಕದಲ್ಲಿಟ್ಟು ಕನ್ನಡ ಚಿತ್ರರಂಗ ನಿಧಾನವಾಗಿ ಕಾರ್ಯಚಟುವಟಿಕೆ ಆರಂಭಿಸಿದೆ. ದಿಗಂತ್ ಹಾಗೂ ಐಂದ್ರಿತಾ ರೇ ಬಹಳ ವರ್ಷಗಳ ಬಳಿಕ ಜೊತೆಯಾಗಿ ನಟಿಸಿರುವ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್ ಮಾಡಲಾಗಿದೆ. ವಿಶೇಷ ಅಂದ್ರೆ ಗೋಲ್ಡನ್ ಸ್ಟಾರ್ ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆಗೊಳಿಸಿ ಇಡೀ ತಂಡಕ್ಕೆ ಶುಭ ಕೋರಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ಕೊರೊನಾದಿಂದಾಗಿ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಈ ಸಮಾರಂಭದಲ್ಲಿ ಚಿತ್ರೋದ್ಯಮದ ಗೆಳೆಯರನ್ನು ನೋಡಿ ಬಹಳ ಖುಷಿಯಾಗಿದೆ. ಚಿತ್ರಮಂದಿರಗಳು ಬೇಗ ಆರಂಭವಾಗಲಿ.. ಸಿನಿಮಾದ ಚಟುವಟಿಕೆಗಳು ಚುರುಕುಗೊಳ್ಳಲಿ.. ಎಲ್ಲರ ಖಾತೆಗೂ ಹಣ ಬರಲಿ ಎಂದು ಗಣೇಶ್ ಹಾರೈಸಿದ್ರು.
‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರದಲ್ಲಿ ದಿಗಂತ್ ಮಲೆನಾಡ ಹುಡುಗನ ಪಾತ್ರ ಮಾಡಿದ್ದಾರೆ. ‘‘ನಾನು ಮೂಲತಃ ಮಲೆನಾಡಿನವನು.. ಅಡಿಕೆ ಬೆಳೆದು ನನಗೆ ಅಭ್ಯಾಸವಿದೆ. ಈ ಸಿನಿಮಾ ಮಲೆನಾಡಿನ ಹುಡುಗನ ಕಥೆಯಾಗಿರೋದ್ರಿಂದ ನನಗೆ ನಟಿಸಲು ಸುಲಭವಾಯಿತು’’ ಎಂದಿದ್ದಾರೆ ದಿಗಂತ್.
‘‘ಚಿತ್ರದ ಕಥೆ ತುಂಬಾ ಇಷ್ಟ ಆಯ್ತು.. ಕಥೆ ಕೇಳಿದ ಕೂಡಲೇ ಈ ಪಾತ್ರದಲ್ಲಿ ನಟಿಸುವ ಮನಸ್ಸಾಯಿತು. ಜನ ಈಗ ಉತ್ತಮ ಕಥೆಯುಳ್ಳ ಚಿತ್ರಗಳನ್ನು ಇಷ್ಟಪಡುತ್ತಿದ್ದಾರೆ. ಈ ಚಿತ್ರವನ್ನೂ ಸಿನಿರಸಿಕರು ಇಷ್ಟಪಡೋದ್ರಲ್ಲಿ ಯಾವುದೇ ಸಂದೇಹವಿಲ್ಲ’’ ಎಂದಿದ್ದಾರೆ ಮತ್ತೊಬ್ಬ ನಾಯಕಿ ರಂಜನಿ ರಾಘವನ್. ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರದ ಚಿತ್ರೀಕರಣ ಪೂರ್ಣ ಮುಗಿದಿದೆ. ಈಗಾಗ್ಲೇ ರಿ-ರೆಕಾರ್ಡಿಂಗ್ ಹಂತದಲ್ಲಿದೆ. ಮಲೆನಾಡ ಹುಡುಗನ ಜೀವನದಲ್ಲಿ ನಡೆಯುವ ಕಥೆಯಾಗಿರೋದ್ರಿಂದ ಮಲೆನಾಡು ಸಾಗರದಲ್ಲೇ ಹೆಚ್ಚು ಚಿತ್ರೀಕರಣ ನಡೆದಿದೆ. ಈ ಚಿತ್ರವನ್ನು ವಿನಾಯಕ ಕೋಡ್ಸರ ನಿರ್ದೇಶಿಸಿದ್ದು, ಕೊರೊನಾ ಹಾವಳಿ ಕಡಿಮೆ ಆದ್ರೆ ಸೆಪ್ಟೆಂಬರ್ನಲ್ಲಿ ಬಿಡುಗಡೆ ಮಾಡೋಕೆ ನಿರ್ಧರಿಸಿದ್ದಾರೆ.