ಗೋಲ್ಡನ್ ಸ್ಟಾರ್ ಗಣೇಶ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 41ನೇ ವಸಂತಕ್ಕೆ ಕಾಲಿಟ್ಟಿರೋ ನಟನಿಗೆ ಚಿತ್ರರಂಗದ ಗಣ್ಯರು ಶುಭ ಹಾರೈಸಿದ್ದಾರೆ. ಇದೇ ವೇಳೆ ತಾವು ನಟಿಸುತ್ತಿರೋ ಸಿನಿಮಾತಂಡಗಳಿಂದ ಗಣೇಶ್ಗೆ ಸರ್ಪ್ರೈಸ್ ಗಿಫ್ಟ್ಗಳು ಕೂಡ ಸಿಗುತ್ತಿವೆ. ಇವೆಲ್ಲದ ಮಧ್ಯೆ ಗಣೇಶ್ ಅಭಿಮಾನಿಗಳು ನಿರಾಸೆ ಮೂಡ್ನಲ್ಲಿದ್ದಾರೆ. ಯಾಕಂದ್ರೆ, ಕೊರೊನಾ ಹಾವಳಿಯಿಂದ ಬರ್ತ್ಡೇ ಆಚರಿಸಿಕೊಳ್ಳುತ್ತಿಲ್ಲವೆಂದು ಗಣೇಶ್ ತಮ್ಮ ಅಭಿಮಾನಿಗಳಿಗೆ ಈಗಾಗ್ಲೇ ಪತ್ರದ ಮೂಲಕ ತಿಳಿಸಿದ್ದಾರೆ. ಪರಿಸ್ಥಿತಿ ಸರಿ ಇದ್ದಿದ್ದರೆ, ಇಂದು ಗೋಲ್ಡನ್ ಸ್ಟಾರ್ ಗಣೇಶ್ ಮನೆ ಮುಂದೆ ದೊಡ್ಡ ಸಂಭ್ರಮವೇ ಇರ್ತಿತ್ತು.
ಗಣೇಶ್ ಹುಟ್ಟುಹಬ್ಬದ ಹಿನ್ನೆಲೆ ಗಣೇಶ್ ಮನೆಗೆ ತೆರಳಿ ಚಿತ್ರರಂಗದ ಆತ್ಮೀಯರು ಶುಭಕೋರಿದ್ದಾರೆ. ಗೋಲ್ಡನ್ ಕ್ವೀನ್ ಅಮೂಲ್ಯ, ನಟ ರವಿಶಂಕರ್ ಗೌಡ ಪತ್ನಿ ಸಂಗೀತಾ ಸೇರಿದಂತೆ ಆತ್ಮೀಯರು ಗೋಲ್ಡನ್ ಸ್ಟಾರ್ಗೆ ಶುಭ ಹಾರೈಸಿದ್ದಾರೆ. ಜೊತೆಗೆ ವಿಶಿಷ್ಟವಾದ ಕೇಕ್ ತಂದು ಮಧ್ಯರಾತ್ರಿನೇ ಸಂಭ್ರಮಿಸಿದ್ದಾರೆ.
ಇನ್ನು ಅಭಿಮಾನಿಗಳಿಗಾಗಿ ಸಿನಿಮಾ ತಂಡ ಫಸ್ಟ್ ಲುಕ್, ಟೀಸರ್, ಮೋಷನ್ ಪೋಸ್ಟರ್ಗಳನ್ನು ರಿಲೀಸ್ ಮಾಡೋಕೆ ತಯಾರಿ ನಡೆಸಿದೆ. ಸಿಂಪಲ್ ಸುನಿ ನಿರ್ದೇಶನದ ಸಖತ್ ಸಿನಿಮಾದ ಹೊಚ್ಚ ಹೊಸ ಪೋಸ್ಟರ್ ಈಗಾಗ್ಲೆ ರಿಲೀಸ್ ಆಗಿದೆ. ಚಮಕ್ ಬಳಿಕ ಸಿಂಪಲ್ ಸುನಿ ಹಾಗೂ ಗಣೇಶ್ ಕಾಂಬಿನೇಷನ್ನ ಎರಡನೇ ಸಿನಿಮಾ.
ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ ಚಿತ್ರದ ಮೋಷನ್ ಪೋಸ್ಟರ್ ಕೂಡ ಬಿಡುಗಡೆಯಾಗಲಿದೆ. ಬೆಳಗ್ಗೆ 11 ಗಂಟೆಗೆ ಮೋಷನ್ ಪೋಸ್ಟರ್ ರಿಲೀಸ್ ಆಗಲಿದ್ದು, ಮೋಸ್ಟ್ ಎಕ್ಸ್ಪೆಕ್ಟೆಡ್ ಚಿತ್ರಕ್ಕಾಗಿ ಗಣೇಶ್ ಫ್ಯಾನ್ಸ್ ಎದುರು ನೋಡ್ತಿದ್ದಾರೆ.
ಜುಲೈ 2 ಗಣೇಶ್ ಬರ್ತ್ಡೇಯಂದೇ ಜೀ ಕನ್ನಡದಲ್ಲಿ ಸಂಜೆ 4.30ಕ್ಕೆ ಗೀತಾ ಸಿನಿಮಾ ಪ್ರಸಾರ ಆಗಲಿದೆ. ಈ ದಿನ ಸಂಪೂರ್ಣ ಗಣೇಶ್ ಬರ್ತ್ಡೇ ಆಚರಿಸೋಕೆ ಚಿತ್ರರಂಗ ಸಜ್ಜಾಗಿದೆ.