ಜೂನ್ 7,2020 ಸರ್ಜಾ ಕುಟುಂಬ ಎಂದೂ ಮರೆಯಲಾಗದ ದಿನ. ಇದೇ ದಿನ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ರು. ಇದು ಸರ್ಜಾ ಹಾಗೂ ಮೇಘನಾರಾಜ್ ಕುಟುಂಬಕ್ಕೆ ಅರಗಿಸಿಕೊಳ್ಳಲು ಆಗಿರಲಿಲ್ಲ. ಈ ದುರ್ಘಟನೆಯಿಂದ ಹೊರಬರೋಕೆ ಸಾಕಷ್ಟು ಸಮಯವನ್ನೇ ತೆಗೆದುಕೊಂಡಿದ್ರು. ಚಿರು ಅಭಿಮಾನಿಗಳಿಗೂ ಆ ನೋವಿನಿಂದ ಬರೋಕೆ ಸಾಕಷ್ಟು ಸಮಯವೇ ಹಿಡಿದಿತ್ತು. ಇಂದು (ಜೂನ್ 7) ಚಿರಂಜೀವಿ ಸರ್ಜಾ ಮೊದಲ ಪುಣ್ಯಸ್ಮರಣೆ. ಈ ವೇಳೆ ಧ್ರುವ ಸರ್ಜಾ ಭಾವನಾತ್ಮಕ ಪತ್ರ ಬರೆದಿದ್ದಾರೆ.
ಅಣ್ಣ ತಮ್ಮ ಅಂದ್ರೆ ಹೀಗಿರಬೇಕು ಅಂತ ಅದೆಷ್ಟು ಹೇಳಿದ್ರು. ಒಬ್ರನ್ನು ಬಿಟ್ಟು ಮತ್ತೊಬ್ಬರು ಇರುತ್ತಿರಲಿಲ್ಲ. ಇಬ್ಬರಲ್ಲಿ ಯಾರದ್ದೇ ಸಿನಿಮಾ ಮುಹೂರ್ತ ಆದ್ರೂ, ಅಲ್ಲಿ ಧ್ರುವ ಸರ್ಜಾ ಹಾಗೂ ಚಿರಂಜೀವಿ ಸರ್ಜಾ ಇಬ್ಬರೂ ಇರಬೇಕಿತ್ತು. ಇಂತಹ ಬಾಂಧವ್ಯ ಇಬ್ಬರಲ್ಲೂ ಇತ್ತು. ಅದಕ್ಕೆ ಧ್ರುವ ಸರ್ಜಾ ಅಣ್ಣನನ್ನು ನೆನೆದು ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ.
‘‘ನೀನು ದೇವರಮನೆಗೆ ಹೋಗಿ ಒಂದು ವರುಷವಾಯಿತು. ಎಷ್ಟು ಬೇಗ ಒಂದು ವರುಷ. ಈ 365 ದಿನ ನಿನ್ನ ನೆನೆಯದ ದಿನಗಳೇ ಇಲ್ಲ. ಕನಸಿನಲ್ಲಿ ನಿನ್ನ ಕಾಣದ ದಿನಗಳೇ ಇಲ್ಲ. ಮರೆಯಲಾಗದ ಚಿರ ನೆನಪುಗಳು. ಕುಟುಂಬದ ಮೇಲೆ ನಿನಗಿದ್ದ ಅಪಾರವಾದ ಗೌರವ, ಜನಗಳಿಗೆ ನೀನು ತೋರಿಸುತ್ತಿದ್ದ ಪ್ರೀತಿ, ಪ್ರೇಮ ಸ್ನೇಹ, ಉದಾರಗುಣ ಮತ್ತು ಅಜಾತಶತ್ರುವಾಗಿದ್ದ ನಿನ್ನ ನೆನಪುಗಳೇ ಈಗ ನಮ್ಮ ಕರಗಲಾರದ ಆಸ್ತಿ. ನೀನೆಲ್ಲಿದ್ದರೂ ಅಲ್ಲಿ ನಗು ತುಂಬಿರಬೇಕು. ನಿಮ್ಮ ಆತ್ಮ ಸದಾ ಶಾಂತಿಯಿಂದ ಇರಬೇಕು. ಆ ಪ್ರಾರ್ಥನೆಯಲ್ಲೇ, ಎಂದೆಂದು ನಿನ್ನ ನೆನಪಿನಲ್ಲೇ, ನಿನ್ನ ಪ್ರೀತಿಯ ನಿನ್ನ ಕುಟುಂಬ’’ ಎಂದು ಭಾವನಾತ್ಮಕವಾಗಿ ಚಿರು ನೆನೆದು ಧ್ರುವ ಪತ್ರ ಬರೆದಿದ್ದಾರೆ.
ಕೊರೊನಾ ಹಿನ್ನೆಲೆ ಚಿರು ಪುಣ್ಯತಿಥಿಯನ್ನು ಸರ್ಜಾ ಹಾಗೂ ಮೇಘನಾ ಕುಟುಂಬ ಸರಳವಾಗಿ ಮಾಡುತ್ತಿದ್ದು, ಚಿರು ಸಮಾಧಿ ಬಳಿ ಸರ್ಜಾ ಕುಟುಂಬ ಹಾಗೂ ಮೇಘನಾ ಕುಟುಂಬ ಹೋಗಿ, ಪೂಜೆ ಕಾರ್ಯಗಳಲ್ಲಿ ಭಾಗಿಯಾಗಿದೆ.