ಕರ್ನಾಟಕದ ಮನೆ ಮನೆಗೂ ಡಾ. ವಿಜಯ್ ಸಂಕೇಶ್ವರ್ ಯಾರು ಅನ್ನೋದು ಗೊತ್ತಿದೆ. ಸಾರಿಗೆ, ಪತ್ರಿಕೋದ್ಯಮ, ಸೇರಿದಂತೆ ಹಲವು ಕ್ಷೇತ್ರದಲ್ಲಿ ವಿಜಯ್ ಸಂಕೇಶ್ವರ್ ಯಶಸ್ಸು ಕಂಡಿದ್ದಾರೆ. ಇದೀಗ VRL ಮೀಡಿಯಾ ಸಂಸ್ಥೆಯಡಿಯಲ್ಲಿ VRL ಫಿಲಂ ಪ್ರೊಡಕ್ಷನ್ ಆರಂಭ ಆಗಿದೆ. VRL ಸಮೂಹ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಪ್ರೊಮೋಟರ್ ಆಗಿರೋ ವಿಜಯ್ ಸಂಕೇಶ್ವರ್ ಪುತ್ರ ಆನಂದ್ ತಂದೆಯ ಜೀವನಾಧಾರಿತ ಬಯೋಪಿಕ್ ಸಿನಿಮಾವನ್ನು ನಿರ್ಮಾಣ ಮಾಡಲಿದ್ದು, ಚಿತ್ರದ ಟೈಟಲ್ ವಿಜಯಾನಂದ.
1976 ರಲ್ಲಿ ಒಂದು ಟ್ರಕ್ ನಿಂದ ಶುರುವಾಗಿ, ಭಾರತದ ಅತಿದೊಡ್ಡ ಸಂಸ್ಥೆಯ ಮಾಲೀಕರಾಗಿದ್ದಾರೆ. ಪತ್ರಿಕೆ ಹಾಗೂ ಮಾಧ್ಯಮ ರಂಗದಲ್ಲಿ ಡಾ.ವಿಜಯ ಸಂಕೇಶ್ವರರ ಸಾಧನೆಯನ್ನು ತೆರೆಮೇಲೆ ತರಲಾಗುತ್ತಿದೆ. ಇದು ಕನ್ನಡ ಚಿತ್ರರಂಗದ ಮೊದಲ ಅಫೀಷಿಯಲ್ ಹಾಗೂ ಕಮರ್ಷಿಯಲ್ ಬಯೋಪಿಕ್.
VRL ಫಿಲಂ ಪ್ರೊಡಕ್ಷನ್ಸ್ ಸಂಸ್ಥೆಯಿಂದ ಆನಂದ ಸಂಕೇಶ್ವರ ನಿರ್ಮಿಸುತ್ತಿರುವ ವಿಜಯಾನಂದ ಚಿತ್ರದ ಫಸ್ಟ್ ಲುಕ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ‘ವಿಜಯಾನಂದ’ ಸಿನಿಮಾವನ್ನು ರಿಷಿಕಾ ಶರ್ಮಾ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸತತವಾಗಿ 8 ವರ್ಷಗಳಿಂದ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. ಸಿನಿಮಾ ಹಾಗು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕಲಾ ವಿನ್ಯಾಸ, ವಸ್ತ್ರ ವಿನ್ಯಾಸ ಹೀಗೆ ಹಲವಾರು ವಿಭಾಗಗಳಲ್ಲಿ ಅನುಭವವನ್ನು ಹೊಂದಿರೋ ರಿಷಿಕಾ ಕನ್ನಡ ಚಿತ್ರ ರಂಗದ ಭೀಷ್ಮ ಎಂದೇ ಖ್ಯಾತರಾಗಿರೋ ಜೆ.ವಿ. ಅಯ್ಯರ್ ಸಂಭಂದಿಕರು. ಈ ಹಿಂದೆ ಟ್ರಂಕ್ ಅನ್ನೋ ಹಾರರ್ ಸಿನಿಮಾವನ್ನು ನಿರ್ದೇಶಿಸಿದ್ದರು.
ಇದೇ ಟ್ರಂಕ್ ಸಿನಿಮಾದಲ್ಲಿ ನಟಿಸಿದ್ದ ಉತ್ತರ ಕರ್ನಾಟಕದ ಪ್ರತಿಭಾವಂತ ನಾಯಕ ನಟ ನಿಹಾಲ್ ವಿಜಯ್ ಸಂಕೇಶ್ವರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಂಗಭೂಮಿ ಹಿನ್ನಲೆಯಿಂದ ಬಂದಿರೋ ನಿಹಾಲ್ ಭಾರತಿ ಮತ್ತು ಗಂಗಾ ಅನ್ನುವ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಲ್ಲದೆ ಚೌಕ ಮತ್ತು ಟ್ರಂಕ್ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಆಗಸ್ಟ್ 2ರಂದು ವಿಜಯ್ ಸಂಕೇಶ್ವರ್ ಅವರ ಹುಟ್ಟುಹಬ್ಬದ ದಿನದಂದೇ ಚಿತ್ರತಂಡ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದೆ.
ವಿಜಯಾನಂದ ಚಿತ್ರಕ್ಕಾಗಿ ಇಡೀ ಚಿತ್ರತಂಡ 2 ವರ್ಷಗಳಿಂದ ಸತತವಾಗಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ತೆಲುಗು ಮತ್ತು ಮಲಯಾಳಂ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕರಾದ ಗೋಪಿ ಸುಂದರ್ ‘ವಿಜಯಾನಂದ’ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಕನ್ನಡ ಚಿತ್ರ ರಂಗದ ಮೊದಲ ಅಫೀಷಿಯಲ್ ಹಾಗೂ ಕಮರ್ಷಿಯಲ್ ಬಯೋಪಿಕ್ ‘ವಿಜಯಾನಂದ’ ಬಗ್ಗೆ ಈಗಾಗ್ಲೇ ಕುತೂಹಲ ಹೆಚ್ಚಾಗಿದೆ.