ಫ್ಯಾಮಿಲಿ ಮ್ಯಾನ್ ಸೀಸನ್ 1 ಮುಗೀತಿದ್ದಂತೆ ಸೀಸನ್ 2ಗಾಗಿ ಕಾದು ಕೂತಿದ್ದರು. ವರ್ಷಗಟ್ಲೇ ಮನೋಜ್ ಬಾಜಪೇಯಿ, ಪ್ರಿಯಾಮಣಿ ಹಾಗೂ ಸಮಂತಾರನ್ನು ನೋಡೋಕೆ ಕಾದು ಕೂತಿದ್ದವ್ರಿಗೆ ಹಬ್ಬದೂಡವನ್ನೇ ಬಡಿಸಿದ್ದಾರೆ. ಎರಡನೇ ಸೀಸನ್ನಲ್ಲಿ ಒಟ್ಟು 10 ಎಪಿಸೋಡ್ಗಳಿವೆ. ಜೂನ್ 4ರ ರಾತ್ರಿ 12 ಗಂಟೆಗೆ ಬಿಡುಗಡೆಯಾಗಿದ್ದ ಸೀರಿಸ್ಗೆ ಭರಪೂರ ರೆಸ್ಪಾನ್ಸ್ ಸಿಕ್ಕಿದೆ. ಜನರು ರಾತ್ರಿಯೀಡಿ ಕೂತು ಒಂದೇ ಏಟಿಗೆ ಫ್ಯಾಮಿಲಿ ಮ್ಯಾನ್ 2 ಸಿರೀಸ್ ನೋಡಿ ಮುಗಿಸಿದ್ದಾರೆ. ಹಾಗಿದ್ರೆ, 2ಎರಡನೇ ಸಿರೀಸ್ನಲ್ಲಿ ಅಂತಹದ್ದೇನಿದೆ?
ಶ್ರೀಲಂಕಾದ ತಮಿಳು ರೆಬೆಲ್ಸ್ ಹೋರಾಟದಿಂದ ಫ್ಯಾಮಿಲಿ ಮ್ಯಾನ್ ಎರಡನೇ ಸೀಸನ್ ಶುರುವಾಗುತ್ತೆ. ಆರಂಭದಲ್ಲೇ ಈ ಸೀರಿಸ್ನ ಕೆಲವು ದೃಶ್ಯಗಳು ಮುಂಬೈ ಹಾಗೂ ಚೆನ್ನೈ ನಡುವೆ ಓಡಾಡುತ್ತೆ. ಮೊದಲ ಎರಡು ಎಪಿಸೋಡ್ ಫ್ಯಾಮಿಲಿ ಮ್ಯಾನ್ನಲ್ಲಿ ಹೊಸತೇನೋ ನಡೀತಿದೆ ಅನ್ನೋದನ್ನ ಅರ್ಥ ಮಾಡಿಕೊಳ್ಳೋಕೆ ಬೇಕು. ಇನ್ನೇನು ಎರಡನೇ ಎಪಿಸೋಡ್ ಮುಗಿಯಬೇಕು ಅನ್ನುವಷ್ಟರಲ್ಲಿ ಸಮಂತಾ ತಾಳುವ ರೆಬೆಲ್ ಅವತಾರ ಸಿರೀಸ್ಗೆ ಕಿಕ್ ಕೊಡುತ್ತೆ.
ಫ್ಯಾಮಿಲಿ ಮ್ಯಾನ್ ಸಿರೀಸ್ನ ಪತ್ತೇದಾರಿ ಮನೋಜ್ ಬಾಜಪೇಯಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ, ಐಟಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿರುತ್ತಾನೆ. ತನಗೆ ಇಷ್ಟವಿರದೇ ಹೋದ್ರೂ, ತನ್ನ ಫ್ಯಾಮಿಲಿಗಾಗಿ ಐಟಿ ಕಂಪನಿಯಲ್ಲಿ ಒತ್ತಾಯದಿಂದ ಕೆಲಸ ಮಾಡುತ್ತಾನೆ. ಆದ್ರೆ, ನಿಧಾನವಾಗಿ ತನ್ನ ಹಳೇ ವೃತ್ತಿಗೆ ಬರುವವರೆಗೂ ಫ್ಯಾಮಿಲಿ ಮ್ಯಾನ್ ನೋಡುಗರಲ್ಲಿ ಕುತೂಹಲ ಕೆರಳಿಸುತ್ತಾ ಹೋಗುತ್ತೆ. ಶ್ರೀಲಂಕಾದ ತಮಿಳು ರೆಬಲ್ಸ್, ಪಾಕಿಸ್ತಾನದ ಐಎಸ್ಐ ಹಾಗೂ ಭಾರತದ ಪತ್ತೆದಾರಿಗಳ ನಡುವೆ ಇಡೀ ಫ್ಯಾಮಿಲಿ ಮ್ಯಾನ್ ಸಿರೀಸ್ ಕುತೂಹಲಗಳನ್ನು ಸೃಷ್ಟಿಸುತ್ತಾ ಸಾಗುತ್ತೆ. ಫ್ಯಾಮಿಲಿಮ್ಯಾನ್ ಸಿರೀಸ್ನಲ್ಲಿ ಮನೋಜ್ ಬಾಜಪೇಯಿ ಎಷ್ಟು ಮುಖ್ಯನೋ ಸಮಂತಾ ಕೂಡ ಅಷ್ಟೇ ಮುಖ್ಯ ಅಂತ ಅನಿಸುತ್ತಾರೆ. ಸಮಂತಾ ಅವರ ಡಿ-ಗ್ಲಾಮರ್ ರೋಲ್, ರೆಬೆಲ್ ಲುಕ್ ಇಡೀ ಸಿರೀಸ್ನ ಪ್ಲಸ್ ಪಾಯಿಂಟ್.
ಫ್ಯಾಮಿಲಿಮ್ಯಾನ್ ಸಿರೀಸ್ನಲ್ಲಿ ಮಮತಾ ಬ್ಯಾನರ್ಜಿಯನ್ನು ಪ್ರತಿಬಿಂಬಿಸೋ ಪ್ರಧಾನಿಯ ಪಾತ್ರವಿದೆ. ಇದು ನಿರ್ದೇಶಕರ ಆಸೆಯೋ.. ಇಲ್ಲಾ ಕಲ್ಪನೆಯೋ? ಇಲ್ಲಾ ಇದು ಭವಿಷ್ಯದಲ್ಲಿ ನಡೆಯುವ ಕಥೆಯೋ? ಇದೆಲ್ಲದ ಏನೇ ಇದ್ದರೂ, ಫ್ಯಾಮಿಲಿ ಮ್ಯಾನ್ 2 ನೋಡುಗರ ಗಮನ ಸೆಳೆದಿದೆ. ಮೂರುನೇ ಸಿರೀಸ್ಗೆ ನಾಂದಿ ಹಾಡಿದೆ.