2022-23ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಉನ್ನತ ಶಿಕ್ಷಣವನ್ನು ಕನ್ನಡದಲ್ಲಿ ಕಲಿಯಲಿ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ. ಎಂಜಿನಿಯರಿಂಗ್ ಸೇರಿ ಎಲ್ಲ ವೃತ್ತಿಪರ ಕೋರ್ಸುಗಳನ್ನು ಕನ್ನಡದಲ್ಲಿ ಕಲಿಯಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಹೀಗಾಗಿ ಎಂಜಿನಿಯರಿಂಗ್ ಕೋರ್ಸುಗಳ ಪಠ್ಯವನ್ನು ಕನ್ನಡಕ್ಕೆ ಭಾಷಾಂತರಿಸಲಾಗುತ್ತಿದೆಯೆಂದು ಉನ್ನತ ಶಿಕ್ಷಣ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಬಳಿಕ ಮಾತೃಭಾಷೆಗೆ ಅಧ್ಯತೆ ನೀಡಲಾಗಿದೆ. ಈ ಮೂಲಕ ಕನ್ನಡಕ್ಕೆ ಇನ್ನೂ ಹೆಚ್ಚಿನ ಶಕ್ತಿ ಬರುತ್ತೆ. ಈ ಬಗ್ಗೆ ಯಾವ ಗೊಂದಲ, ಅನುಮಾನವೂ ಬೇಡ ಎಂದಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಎಲ್ಲಾ ಭಾಷೆಗಳ ಅಧ್ಯಾಪಕರ ಸಂಘದವರ ವತಿಯಿಂದ ಆಯೋಜಿಸಲಾಗಿದ್ದ ಹೊಸ ಶಿಕ್ಷಣ ನೀತಿ; ಭಾರತೀಯ ಭಾಷೆಗಳ ಅಧ್ಯಯನ ವಿಷಯದ ಕುರಿತ ವೆಬಿನಾರ್ನಲ್ಲಿ ಭಾಗವಹಿಸಿದ್ದ ಡಿಸಿಎಂ ಈ ಮಾಹಿತಿ ನೀಡಿದರು.
ವೃತ್ತಿ ಶಿಕ್ಷಣದಲ್ಲಿ ಕನ್ನಡ ಅಳವಡಿಕೆಯಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲೂ ಕನ್ನಡವನ್ನು ಬಳಸಬಹುದು. ತಂತ್ರಜ್ಞಾನ ಮತ್ತು ಆವಿಷ್ಕಾರ ಬೆಳೆದಂತೆಲ್ಲ ಅದಕ್ಕೆ ಸಮನಾಗಿ ಕನ್ನಡವೂ ಬೆಳೆಯಬೇಕು. ಮಾತೃಭಾಷೆಯ ಅಸ್ತಿತ್ವ ಎಲ್ಲ ಕಡೆಯೂ ಇರಬೇಕು ಎಂಬುದು ಸರಕಾರದ ಉದ್ದೇಶವಾಗಿದೆ. ಶಿಕ್ಷಣ ನೀತಿಯ ಪ್ರಕಾರ ಮಕ್ಕಳು ಎರಡು ದೇಶಿಯ ಭಾಷೆಗಳನ್ನು ಹಾಗೂ ಒಂದು ಅಂತಾರಾಷ್ಟ್ರೀಯ ಭಾಷೆಯನ್ನು ಕಡ್ಡಾಯವಾಗಿ ಕಲಿಯಲೇಬೇಕು. ಅದರಲ್ಲಿ ಮಾತೃಭಾಷೆಗೆ ಮೊದಲ ಪ್ರಾಶಸ್ತ್ಯ ಇರುತ್ತದೆ ಎಂದು ಡಿಸಿಎಂ ತಿಳಿಸಿದ್ದಾರೆ.