ಕರ್ನಾಟಕದ ಮೂಲೆ ಮೂಲೆಯಲ್ಲಿರೋ ಕುಟುಂಬಕ್ಕೂ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಗೊತ್ತೇ ಇರುತ್ತೆ. ಅದ್ರಲ್ಲೂ ಸಂಗೀತ ಪ್ರಿಯರಿಗಂತ್ಲೂ ಈ ಕಾರ್ಯಕ್ರಮದಲ್ಲಿ ಭಾಗವಹಿಸೋದೇ ಒಂದು ಹೆಮ್ಮೆ. ಗಾನಗಾರುಡಿಗ ಎಸ್ಪಿ ಬಾಲಸುಬ್ರಹ್ಮಣ್ಯಂ ನಡೆಸಿಕೊಡುತ್ತಿದ್ದ ಸಂಗೀತ ಕಾರ್ಯಕ್ರಮ ಎಲ್ಲರ ಅಚ್ಚು ಮೆಚ್ಚಿಗೆ ಕಾರಣವಾಗಿತ್ತು. ಅದೇ ಸಂಗೀತ ಕಾರ್ಯಕ್ರಮ ಈಗ ಮತ್ತೆ SPBಅವರನ್ನು ನೆನಪಿಸಲೆಂದೇ ಬರುತ್ತಿದೆ.
ಎಸ್ ಪಿ ಬಿ ಅವರ ನೆನಪಿನಲ್ಲಿ ಈ ಜನಪ್ರಿಯ ಕಾರ್ಯಕ್ರಮ ಮತ್ತೆ ಆರಂಭವಾಗಲಿದೆ. ಮೂರು ವರ್ಷಗಳ ಹಿಂದೆ ಚೆನ್ನೈನಲ್ಲಿ ಎಸ್ಪಿಬಿ ಅವ್ರನ್ನು ಕಲರ್ಸ್ ಕನ್ನಡದ ಮುಖ್ಯಸ್ಥ ಭೇಟಿ ಮಾಡಿದ್ರು. ಆಗ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮವನ್ನು ಪುನಃ ಆರಂಭಿಸುವ ಚರ್ಚಿಸಿದ್ದರು. ಆಗ ಎಸ್ಪಿ ಬಾಲಸುಬ್ರಹ್ಮಣ್ಯಂ ನನ್ನ ಶೆಡ್ಯುಲ್ ನೋಡಿ ತಿಳಿಸುತ್ತೇನೆ ಎಂದಿದ್ದರಂತೆ. ಮುಂದೊಂದು ದಿನ ಎಸ್ಪಿಬಿ ಬರೆದ ಕಾಗದದಲ್ಲಿ ಬೇರೆ ಕಾರ್ಯಕ್ರಮಗಳು ಈಗಾಗಲೇ ನಿಗದಿಯಾಗಿವೆ. ಹೀಗಾಗಿ 2019ರಲ್ಲಿ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮ ಆರಂಭಿಸೋಣ ಎಂದು ಬರೆದಿದ್ದರಂತೆ. ಇನ್ನೇನು ಕಾರ್ಯಕ್ರಮ ಆರಂಭ ಮಾಡಬೇಕು ಎನ್ನುವಷ್ಟರಲ್ಲೇ ಕೊರೊನಾ ಬಂದಿತ್ತು, ನಂತರದ ದಿನಗಳಲ್ಲಿ ಎಸ್ಪಿಬಿ ಅವರು ದೂರವಾದರು.
ಈಗ ಅವರ ನೆನಪಲ್ಲಿ ಇದೇ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಆರಂಭ ಆಗಲಿದೆ. ಆಗಸ್ಟ್ 14 ರಿಂದ ರಾಜೇಶ್ ಕೃಷ್ಣನ್, ವಿ.ಹರಿಕೃಷ್ಣ ಹಾಗೂ ರಘು ದೀಕ್ಷಿತ್ ಸಾರಥ್ಯದಲ್ಲಿ ಈ ಕಾರ್ಯಕ್ರಮ ಶುರುವಾಗಲಿದೆ. ವಿಶೇಷ ತೀರ್ಪುಗಾರರಾಗಿ ಎಸ್ ಪಿ ಬಿ ಅವರ ಪುತ್ರ ಎಸ್ ಪಿ ಚರಣ್ ಕೂಡ ಇರುತ್ತಾರೆ. ಈಗಾಗ್ಲೇ ಆಡಿಷನ್ ಮುಗಿದಿದ್ದು, 16 ರಿಂದ 18 ಮಂದಿ ಗಾಯಕರನ್ನು ಆಯ್ಕೆ ಮಾಡಲಾಗಿದೆ.