ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪೊಗರು ಮಾಡಿದ ಸದ್ದು ಹೇಗಿತ್ತು ಅನ್ನೋದು ಗೊತ್ತೇ ಇದೆ. ಬಾಕ್ಸಾಫೀಸ್ನಲ್ಲಿ ಪೊಗರು ಅಬ್ಬರಿಸುತ್ತಿದ್ದಂತೆ ಕನ್ನಡ ಚಿತ್ರರಂಗ ಚೇತರಿಸಿಕೊಂಡಿತ್ತು. ಒಂದೊಂದಾಗಿ ಸ್ಟಾರ್ ಸಿನಿಮಾಗಳು ಬಿಡುಗಡೆಯಾಗೋಕೆ ಮನಸ್ಸು ಮಾಡಿದ್ದು ಪೊಗರು ಬಿಡುಗಡೆ ಆದ್ಮೇಲೆನೇ. ಅದೇ ಸಿನಿಮಾ ಈಗ ಕನ್ನಡಿಗರ ಮನೆಮನೆಗೂ ಬರ್ತಿದೆ.
ಪೊಗರು ಸಿನಿಮಾ ಮೊಟ್ಟ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರ ಆಗಲಿದೆ. ಯುಗಾದಿ ಹಬ್ಬದ ಸಂಭ್ರಮದಲ್ಲಿ ಉದಯಟಿವಿ ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಚಿತ್ರವನ್ನ ಪ್ರಸಾರ ಮಾಡುತ್ತಿದೆ. ಚಂದನ್ ಶೆಟ್ಟಿ ಸಂಗೀತವಿರೋ ಈ ಸಿನಿಮಾದ ಹಾಡುಗಳು ಸಖತ್ ಸದ್ದು ಮಾಡಿದ್ದವು. ರಗಡ್ ಲುಕ್ಕಿನಲ್ಲಿ ಮೂಡಿದ ಸಾಹಸ ದೃಶ್ಯಗಳು ಧ್ರುವ ಅಭಿಮಾನಿಗಳನ್ನ ರಂಜಿಸಿತ್ತು. ಈ ಪೊಗರು ತೆರೆಕಂಡು 53ನೇ ದಿನಕ್ಕೆ ಕಿರುತೆರೆಯಲ್ಲಿ ಪ್ರಸಾರ ಆಗಲಿದೆ. ಅಗಲಿದೆ ಅಣ್ಣ ಚಿರಂಜೀವಿ ಸರ್ಜಾಗೆ ಈ ಸಿನಿಮಾವನ್ನ ಅರ್ಪಿಸಿದ್ದು, ಉದಯಟಿವಿಯ ಪ್ರಸಾರ ಆಗುವ ಈ ಸಿನಿಮಾ ನೋಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಇತ್ತೀಚೆಗೆಷ್ಟೇ ಪೊಗರು ಸಿನಿಮಾ 50 ದಿನಗಳನ್ನ ಪೂರೈಸಿತ್ತು. ಈ ಸಂಭ್ರಮವನ್ನ ಸ್ವತ: ಆ್ಯಕ್ಷನ್ ಪ್ರಿನ್ಸ್ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಇನ್ನು ಪೊಗರು ಬಾಕ್ಸಾಫೀಸ್ನಲ್ಲೂ ಬೇಜಾನ್ ಸದ್ದು ಮಾಡಿದೆ. 50 ದಿನಗಳಲ್ಲಿ ಸುಮಾರು ₹50 ಕೋಟಿಗೂ ಅಧಿಕ ಗಳಿಕೆ ಕಂಡು ಬ್ಲಾಕ್ಬಸ್ಟರ್ ಲಿಸ್ಟ್ ಸೇರಿದೆ.
ಪೊಗರು ಬಳಿಕ ಧ್ರುವ ಸರ್ಜಾ ಯಾವ ಸಿನಿಮಾ ಸೆಟ್ಟೇರುತ್ತೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಈಗಾಗ್ಲೇ ಸೆಟ್ಟೇರಬೇಕಿದ್ದ ದುಬಾರಿ ಚಿತ್ರದ ಧ್ರುವ ಪಕ್ಕಕ್ಕಿಟ್ಟಿದ್ದಾರೆ. ಹೀಗಾಗಿ ಯಾವ ಸಿನಿಮಾ ಸೆಟ್ಟೇರುತ್ತೆ? ಈ ಬಾರಿ ಧ್ರುವ ಹೇಗೆ ಕಾಣಿಸಿಕೊಳ್ತಾರೆ? ಅನ್ನೋ ಕಾತುರದಲ್ಲಿದ್ದಾರೆ ಧ್ರುವ ಅಭಿಮಾನಿಗಳು.