ಕೊರೊನಾ ಎರಡನೇ ಅಲೆ ಕನ್ನಡಚಿತ್ರರಂಗಕ್ಕೆ ಒಂದಾದ ಮೇಲೊಂದರಂತೆ ಪೆಟ್ಟು ಕೊಡುತ್ತಲೇ ಇದೆ. ನಿರ್ಮಾಪಕ ರಾಮು, ಚಂದ್ರಶೇಖರ್ ಸೇರಿದಂತೆ ಕೆಲ ನಿರ್ಮಾಪಕರು ಈಗಾಗ್ಲೇ ಕೊರೊನಾಗೆ ಬಲಿಯಾಗಿದ್ದಾರೆ. ಈ ಮಧ್ಯೆ ಮತ್ತೊಬ್ಬ ಹೆಸರಾಂತ ನಿರ್ದೇಶಕ ರೇಣುಕಾ ಶರ್ಮಾ ಮಹಾಮಾರಿಗೆ ಕೊನೆಯುಸಿರೆಳೆದಿದ್ದಾರೆ
.
ಡಾ.ರಾಜ್ಕುಮಾರ್ ನಟನೆಯ ಕವಿರತ್ನ ಕಾಳಿದಾಸ, ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಅಂಜದ ಗಂಡು, ಕಿಂದರಿ ಜೋಗಿಯಂತಹ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ಇವರಿಗೆ ಕೊರೊನಾ ಸೋಂಕು ತಗುಲಿತ್ತು.
81 ವರ್ಷ ವಯಸ್ಸಿನ ರೇಣುಕಾ ಶರ್ಮಾ ಕೊರೊನಾ ಕಳೆದ ದಿನಗಳಿಂದ ಗಿರಿನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೊರೊನಾ ಸೋಂಕಿನ ಜೊತೆಗೆ ನ್ಯೂಮೋನಿಯಾದಿಂದ ಬಳಲುತ್ತಿದ್ದ ಕಾರಣ ನಿರ್ದೇಶಕ ರೇಣುಕಾ ಶರ್ಮಾ ಅವ್ರಿಗೆ ಫಲಕಾರಿಯಾಗದೆ ನಿನ್ನೆ ರಾತ್ರಿ ವಿಧಿವಶರಾಗಿದ್ದಾರೆ.
1981ರಲ್ಲಿ ಅನುಪಮ ಚಿತ್ರದ ಮೂಲಕ ನಿರ್ದೇಶಕರಾದ ರೇಣುಕಾ ಶರ್ಮಾ, ಕವಿರತ್ನ ಕಾಳಿದಾಸ, ಶಹಬ್ಬಾಸ್ ವಿಕ್ರಮ್, ಸತ್ಕಾರ, ನಮ್ಮ ಊರು ದೇವತೆ, ಅಂಜದ ಗಂಡು, ಕಿಂದರ ಜೋಗಿ, ಶಬರಿ ಮಲೆ ಶ್ರೀ ಅಯ್ಯಪ್ಪ, ಭರ್ಜರಿ ಗಂಡು, ಹಠಮಾರಿ ಹೆಣ್ಣು ಕಿಲಾಡಿ ಗಂಡು ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕೆ ಅಂತಹ ಸೂಪರ್ ಹಿಟ್ ಸಿನಿಮಾಗಳನ್ನ ನಿರ್ದೇಶನ ಮಾಡಿದ್ದಾರೆ. ರೇಣುಕಾ ಶರ್ಮಾ ಪತ್ನಿ ಇಬ್ಬರು ಹೆಣ್ಣು ಮಕ್ಕಳನ್ನ ಅಗಲಿದ್ದಾರೆ.