ರಾಜ್ಯ ಕಾಂಗ್ರೆಸ್ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಅಧ್ಯಕ್ಷ ಡಿಕೆ ಶಿವಕುಮಾರ್ ಮುಸುಕಿನ ಗುದ್ದಾಟ ನಿನ್ನೆ ಮೊನ್ನೆಯದಲ್ಲ. ಈ ಕಿತ್ತಾಟಗಳಲ್ಲಿ ರಾಜ್ಯ ಕಾಂಗ್ರೆಸ್ ಮನೆಯೊಂದು 3 ಬಾಗಿಲಿನಂತಾಗಿದೆ. ಈಗ ಸದ್ಯಕ್ಕೆ ಸಿದ್ದು, ಡಿಕೆಶಿ ಕೋಲ್ಡ್ ವಾರ್ಗೆ 17 ಶಾಸಕರ ಮಿತ್ರ ಮಂಡಳಿ ಬಹುದೊಡ್ಡ ಚರ್ಚೆಯಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರ ರಚಿಸಿದ ವೇಳೆ 17 ಶಾಸಕರು ರಾಜೀನಾಮೆ ಕೊಟ್ಟು, ಮೈತ್ರಿ ಸರ್ಕಾರವನ್ನು ಉರುಳಿಸಿದ್ರು. ಇದು ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು. ಪಕ್ಷ ಬಿಟ್ಟು ಹೋದವ್ರನ್ನು ಇನ್ಮುಂದೆ ಹತ್ತಿರಕ್ಕೆ ಬಿಟ್ಟುಕೊಳ್ಳಲ್ಲ ಅಂತ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದರು. ಆದ್ರೀಗ ಡಿಕೆ ಶಿವಕುಮಾರ್ ಆಡಿದ ಒಂದು ಮಾತು ಕಾಂಗ್ರೆಸ್ ಪಾಳೆಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ.
ಕಾಂಗ್ರೆಸ್ ಪಕ್ಷಕ್ಕೆ ಬರುವವರು ಅರ್ಜಿ ಹಾಕಿ ಬರಲಿ ಅಂತ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ರು. ಡಿಕೆಶಿ ಹೀಗೆ ಹೇಳಿಕೆ ನೀಡುತ್ತಿದ್ದಂತೆ ಸಿದ್ದರಾಮಯ್ಯ ಅಖಾಡಕ್ಕೆ ಇಳಿದಿದ್ದರು. ಪ್ರಳಯ ಆದ್ರೂ ಕಾಂಗ್ರೆಸ್ ಸೇರಿಸಲ್ಲ ಅಂದಿದ್ದೆ. ಮುಂದೆ ಇದೇ ವಿಷಯದ ಬಗ್ಗೆ ಮಾತನಾಡುತ್ತೇನೆ ಅಂತ ಸಿದ್ದು ಗರಂ ಆಗಿದ್ರು. ಅಷ್ಟಕ್ಕೂ ಡಿಕೆ ಶಿವಕುಮಾರ್ ದಿಢೀರನೇ ಮಿತ್ರಮಂಡಳಿಯನ್ನ ಜಪ ಮಾಡಿದ್ದರ ಹಿಂದೆ ರಾಜಕೀಯ ಲೆಕ್ಕಾಚಾರವೇ ಅಡಗಿದೆ.
ಮುಂದಿನ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ ತನ್ನ ನಾಯಕತ್ವದಲ್ಲಿ ಪಕ್ಷವನ್ನ ಗೆಲ್ಲಿಸುಲು ನಿರ್ಧರಿಸಿದ್ದಾರೆ. ಹೀಗಾಗಿ ಹಳೇ ಮೈಸೂರು ಭಾಗದ ಮೇಲೆ ಡಿಕೆಶಿ ಮೊದಲು ಕಣ್ಣಿಟ್ಟಿದ್ದಾರೆ. ಇಲ್ಲಿ ವೈಯಕ್ತಿವಾಗಿ ಪ್ರಾಬಲ್ಯ ಹೆಚ್ಚಿಸಿಕೊಳ್ಳೋಕೆ ಮುಂದಾಗಿದ್ದಾರೆ. ಜೊತೆಗೆ ಶಾಸಕರ ತಂಡ ಕಟ್ಕೊಂಡು, ಪಕ್ಷ ಅಧಿಕಾರಕ್ಕೆ ಬಂದಾಗ ಶಾಸಕರು ತನ್ನ ಪರವಾಗಿ ಧ್ವನಿ ಎತ್ಬೇಕು ಅಂತ ಈ ಅಸ್ತ್ರ ಬಿಟ್ಟಿದ್ದಾರೆ ಅನ್ನೋ ಮಾತುಗಳು ಕೇಳಿಬರ್ತಿವೆ.
ಇನ್ನೊಂದ್ಕಡೆ ಕಾಂಗ್ರೆಸ್ನಲ್ಲಿ ತನ್ನ ವರ್ಚಸ್ಸೇ ಮುಂದುವರೆಯಬೇಕು ಅನ್ನೋ ಹಠ ಸಿದ್ದರಾಮಯ್ಯ ಅವರದ್ದು. ತಮ್ಮ ಬಳಗಕ್ಕೆ ತೊಂದರೆ ಆಗದಂತೆ ಸಿದ್ದರಾಮಯ್ಯ ನೋಡಿಕೊಳ್ತಿದ್ದಾರೆ. BJP ಹಾಗೂ JDS ನಾಯಕರೊಂದಿಗೆ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ತಿದ್ದಾರೆ. ತನ್ನನ್ನು ಹಿಂಬಾಲಿಸದವ್ರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಅನ್ನೋದು ಸಿದ್ದರಾಮಯ್ಯ ಹಠ. ಅಲ್ಲದೆ ಅಧ್ಯಕ್ಷರಿಗಿಂತ ತಾನೇ ಸೂಪರ್ ಪವರ್ ಆಗ್ಬೇಕು ಅಂತ ಸಿದ್ದು ಪಣತೊಟ್ಟಿದ್ದಾರೆ ಅನ್ನೋದು ಮತ್ತೊಂದು ಮಾತು.
ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ, ಡಿಕೆಶಿ ನಡುವಿನ ಶೀತಲ ಸಮರ ಸದ್ಯಕ್ಕಂತೂ ನಿಲ್ಲುವ ಲಕ್ಷಣಗಳಿಲ್ಲ. ಇಬ್ಬರು ನಾಯಕರ ಹೇಳಿಕೆಗಳು ಸದ್ಯಕ್ಕೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿವೆ. ಹೀಗಾಗಿ ಈ ಇಬ್ಬರು ನಾಯಕರ ಮುಂದಿನ ನಡೆ ಏನಿರುತ್ತೆ ಅನ್ನೋದು ಕುತೂಹಲ ಕೆರಳಿಸಿದೆ.