ಪೊಗರು ಸಿನಿಮಾದ ಬಳಿಕ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ದುಬಾರಿ ಸಿನಿಮಾ ಸೆಟ್ಟೇರಬೇಕಿತ್ತು. ಈಗಾಗ್ಲೇ ಚಿತ್ರದ ಮುಹೂರ್ತ ಕೂಡ ಆಗಿತ್ತು. ಪೊಗರು ನಿರ್ದೇಶಕ ನಂದಕಿಶೋರ್ ಆ್ಯಕ್ಷನ್ ಕಟ್ ಹೇಳ್ತಾರೆ ಅಂತಾನೂ ಆಗಿತ್ತು. ಆದ್ರೆ, ಕೆಲವು ದಿನಗಳ ಹಿಂದೆ ನಂದ ಕಿಶೋರ್ ದುಬಾರಿ ಚಿತ್ರದಿಂದ ಹೊರ ಬಂದಿದ್ದಾರೆ ಅನ್ನೋ ಸುದ್ದಿನೂ ಹರಿದಾಡಿತ್ತು. ಆದ್ರೀಗ, ಸಿನಿಮಾದ ನಿರ್ಮಾಪಕ ದುಬಾರಿ ಚಿತ್ರದ ಬಗ್ಗೆ, ನಂದ ಕಿಶೋರ್ ನಿರ್ದೇಶನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಉದಯ ಕೆ ಮೆಹ್ತಾ ಧ್ರುವ ಸರ್ಜಾ ಅಭಿನಯದ ಸಿನಿಮಾವನ್ನು ನಿರ್ಮಾಣ ಮಾಡ್ಬೇಕಿತ್ತು. ಆದ್ರೆ ದುಬಾರಿ ಚಿತ್ರವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಸಿನಿಮಾದ ಬಹುತೇಕ ಚಿತ್ರೀಕರಣ ವಿದೇಶದಲ್ಲಿ ನಡೆಯಬೇಕಿದೆ. ಎಲ್ಲಾ ಕಡೆ ಕೊರೊನಾ ಹಾವಳಿ ಇಡ್ತಿರೋದ್ರಿಂದ ವಿದೇಶದಲ್ಲಿ ಚಿತ್ರೀಕರಣ ಮಾಡಲು ಅನುಮತಿಯಿಲ್ಲ. ಹೀಗಾಗಿ ತಾತ್ಕಾಲಿಕವಾಗಿ ಸಿನಿಮಾ ಚಿತ್ರೀಕರಣವನ್ನು ಮುಂದೂಡಲಾಗಿದೆ. ಜೊತೆ ನಂದಕಿಶೋರ್ ಅವರೇ ಈ ಸಿನಿಮಾವನ್ನು ನಿರ್ದೇಶಿಸುತ್ತಾರೆಂದು ನಿರ್ಮಾಪಕ ಉದಯ್ ಕೆ ಮೆಹ್ತಾ ಇಂಗ್ಲಿಷ್ ವೆಬ್ ಸೈಟ್ವೊಂದಕ್ಕೆ ತಿಳಿಸಿದ್ದಾರೆ.
ಧ್ರುವ ಸರ್ಜಾ ದುಬಾರಿ ನಿಂತ್ಮೇಲೆ ಮುಂದೇನು? ಯಾವ ಸಿನಿಮಾ ಸೆಟ್ಟೇರುತ್ತೆ ಅನ್ನೋದಕ್ಕೂ ನಿರ್ಮಾಪಕರೇ ಉತ್ತರ ಕೊಟ್ಟಿದ್ದಾರೆ. ದುಬಾರಿಗೂ ಮೊದಲು ಧ್ರುವ ಸರ್ಜಾ ಹೊಸದೊಂದು ಸಿನಿಮಾ ಸೆಟ್ಟೇರುತ್ತಿದೆ. ಈಗಾಗ್ಲೇ ಫೈನಲ್ ಆಗಿದ್ದು, ಶೀಘ್ರದಲ್ಲೇ ಚಿತ್ರೀಕರಣ ಶುರುವಾಗಲಿದೆ.
ಹೊಸ ಸಿನಿಮಾವನ್ನು ಯಾರು ನಿರ್ದೇಶನ ಮಾಡುತ್ತಾರೆ ಅನ್ನೋ ಕುತೂಹಲ ಎದ್ದಿದೆ. ನಂದಕಿಶೋರ್ ಈಗಾಗ್ಲೇ ಕೆ.ಮಂಜು ಪುತ್ರ ಶ್ರೇಯಸ್ ಹೊಸ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಹೀಗಾಗಿ ಧ್ರುವಗೆ ಆ್ಯಕ್ಷನ್ ಕಟ್ ಹೇಳೋದ್ಯಾರು? ಅನ್ನೋ ಕುತೂಹಲವಿದೆ. ಸದ್ಯದಲ್ಲೇ ಆ್ಯಕ್ಷನ್ ಪ್ರಿನ್ಸ್ ಹೊಸ ಚಿತ್ರ ಬಗ್ಗೆ ಘೋಷಣೆಯಾಗಲಿದೆ.